ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ

Update: 2023-12-08 16:21 GMT

ಬೆಂಗಳೂರು, ಡಿ.8: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

85 ವರ್ಷದ ನಟಿ ಲೀಲಾವತಿ ಅವರು ಪುತ್ರ ವಿನೋದ್ ರಾಜ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ನೆಲಮಂಗಲದ ಜ್ಯೂನಿಯರ್ ಕಾಲೇಜು ಎದುರಿನ ಡಾ.ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ನಾಳೆ ಮಧ್ಯಾಹ್ನದವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲೀಲಾವತಿ ಅವರ ಅಂತ್ಯಕ್ರಿಯೆಯು ನೆಲಮಂಗಲ ಸಮೀಪದ ಸೋಲದೇವನಹಳ್ಳಿಯ ಅವರ ತೋಟದಲ್ಲಿ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

1938ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ್ದ ಲೀಲಾವತಿ ಅವರು, ಓದಿದ್ದು 2ನೇ ತರಗತಿ ಮಾತ್ರ. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾವತಿ ಅವರು ಮೈಸೂರಿನಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಅವರು ವೃತ್ತಿ ರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ನಿರ್ವಹಿಸಿದ್ದರು. 50 ವರ್ಷಗಳ ಕಾಲ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದ ಅವರು ಪುತ್ರ ವಿನೋದ್ ರಾಜ್ ನಟನೆಯ ‘ಯಾರದು'(2009) ಚಿತ್ರದ ನಂತರ ನಟನೆಯಿಂದ ದೂರ ಉಳಿದಿದ್ದರು.

ಸುಬ್ಬಯ್ಯ ನಾಯ್ಡು ಅವರ ಸಂಸ್ಥೆ ಹಾಗೂ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಗಳಲ್ಲಿ ರಂಗಭೂಮಿ ಕಲಾವಿದೆಯಾಗಿ ಅಭಿನಯಿಸಿದ್ದ ಲೀಲಾವತಿ ಅವರು 1949ರಲ್ಲಿ ಶಂಕರ್ ಸಿಂಗ್ ಅವರ ‘ನಾಗಕನ್ನಿಕ’ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. 1953ರಲ್ಲಿ ಬಿಡುಗಡೆಯಾಗಿದ್ದ ‘ಚಂಚಲ ಕುಮಾರಿ’ ಚಿತ್ರದ ಅವರ ಪಾತ್ರವು ಪ್ರಮುಖವಾಗಿತ್ತು. ಅನಂತರದಲ್ಲಿ ‘ಮಾಂಗಲ್ಯ ಯೋಗ' ಚಿತ್ರದ ಮೂಲಕ ಲೀಲಾವತಿ ಅವರು ನಾಯಕಿಯಾಗಿ ಅಭಿನಯಿಸಿದ್ದರು.

ಡಾ.ರಾಜ್‍ಕುಮಾರ್, ಉದಯ್‍ಕುಮಾರ್, ಕಲ್ಯಾಣ್‍ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್‍ನಾಗ್ ಸೇರಿದಂತೆ ಮುಂತಾದವರ ಜೊತೆ ಲೀಲಾವತಿ ಅವರು ಅಭಿನಯಿಸಿದ್ದರು. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಸೇರಿದಂತೆ ಮುಂತಾದ ಭಾಷೆಗಳಲ್ಲಿ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರ: ಲೀಲಾವತಿ ಅವರು ಮದುವೆ ಮಾಡಿನೋಡು ಮತ್ತು ಸಂತ ತುಕಾರಾಮ್ ಸಿನಿಮಾಗಳಿಗೆ 2 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿದ್ದು, ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು, ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಮನೋಜ್ಞ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಕನ್ನಡದ ಕಂದ ಚಿತ್ರಕ್ಕೆ 2006ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಿಕ್ಕಿತ್ತು. ಜೀವಮಾನ ಸಾಧನೆಗಾಗಿ 1999ರಲ್ಲಿ ಲೀಲಾವತಿ ಅವರು ಡಾ.ರಾಜ್‍ಕುಮಾರ್ ಪ್ರಶಸ್ತಿ ಪಡೆದರು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗಿತ್ತು.

2022ರಲ್ಲಿ ನಟಿ ಲೀಲಾವತಿ ಅವರು ಜನರ ಆರೋಗ್ಯ ಸೇವೆಗಾಗಿ ಸ್ವಂತ ಖರ್ಚಿನಲ್ಲಿ ಸೋಲದೇವನಹಳ್ಳಿಯಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಿದ್ದರು. ಇಷ್ಟು ಮಾತ್ರವಲ್ಲದೆ ಲೀಲಾವತಿ ಅವರು ಬಡ ಕಲಾವಿದರಿಗೂ ನೆರವಾಗಿದ್ದರು.

ಲೀಲಾವತಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಎಂ.ಬಿ.ಪಾಟೀಲ, ಪ್ರಿಯಾಂಕ್‍ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಸಂಸದೆ ಸುಮಲತಾ ಹಾಗೂ ಚಿತ್ರರಂಗದ ಗಣ್ಯರಾದ ದ್ವಾರಕೀಶ್, ಅನಂತ್‍ನಾಗ್, ಶ್ರುತಿ, ಗಿರಿಜಾ ಲೋಕೇಶ್, ಸುಂದರ್‍ರಾಜ್, ದರ್ಶನ್, ಸುದೀಪ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಸರಕಾರ ಮಾಡುವ ಕೆಲಸ ಲೀಲಾವತಿ ಮಾಡುತ್ತಿದ್ದರು!

‘ನಟಿ ಲೀಲಾವತಿಯವರು ನನ್ನನ್ನು ಸೇರಿದಂತೆ ಸಾಕಷ್ಟು ಕಲಾವಿದರಿಗೆ ಪ್ರತಿ ತಿಂಗಳು ಹಣವನ್ನು ನೀಡುತ್ತಿದ್ದರು. ಇದರಿಂದ ಕಷ್ಟದಲ್ಲಿ ಇರುವ ಕಲಾವಿದರಿಗೆ ಸಹಾಯವಾಗುತ್ತಿತ್ತು. ಬಣ್ಣ ಹಚ್ಚಿದರೆ ಮಾತ್ರ ನಮ್ಮ ಜೀವನ ನಡೆಯುತ್ತದೆ. ಆದರೆ ಕೊರೊನಾ ನಂತರ ಅವಕಾಶ ಕಡಿಮೆಯಾಗಿದೆ. ಇದರಿಂದ ಸಾಕಷ್ಟು ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ನಟಿ ಲೀಲಾವತಿಯವರು ಮಾಶಾಸನ ನೀಡುವ ಮೂಲಕ ಸರಕಾರ ಮಾಡುವ ಕೆಲಸವನ್ನು ತಾವು ಮಾಡುತ್ತಿದ್ದರು’ ಎಂದು ನಟ ವೈಜನಾಥ್ ಬಿರಾದಾರ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News