ಶಿರಹಟ್ಟಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಆರೋಪ: ಹಾಲಶ್ರೀ ಸ್ವಾಮೀಜಿ ವಿರುದ್ಧ ಮತ್ತೊಂದು ದೂರು

Update: 2023-09-23 04:52 GMT

ಆರೋಪಿ ಹಾಲಶ್ರೀ ಸ್ವಾಮೀಜಿ | ದೂರುದಾರ ಸಂಜಯ್‌ ಚಡವಾಳ

ಗದಗ: ಉದ್ಯಮಿ, ಬಿಜೆಪಿ ಮುಖಂಡ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂ ಎಲ್ ಎ ಟಿಕೇಟ್ ನೀಡುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಆರೋಪ ಕೇಳಿ ಬಂದಿದೆ. 

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂಜಯ್ ಚವಡಾಳ ಅವರು ಅಭಿನವ ಸ್ವಾಮೀಜಿ ವಿರುದ್ಧ ವಂಚನೆ ಆರೋಪ ಮಾಡಿ, ಸೆಪ್ಟಂಬರ್ 19 ರಂದು ಮುಂಡರಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಬಿಂಬಿಸಿಕೊಂಡಿದ್ದ ಸಂಜಯ್‌ ಚವಡಾಳ ಅವರು ಚುನಾವಣೆಗೆ ಮುಂಚಿತವಾಗಿ 1 ಕೋಟಿ ರೂ. ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್‌ ಚವಡಾಳ, ʼಅರುಂಧತಿ ಫೌಂಡೇಷನ್‌ʼ ಹೆಸರಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು. ಬಿಜೆಪಿ ವರಿಷ್ಠರೊಂದಿಗೆ ನಿಕಟ ಸಂಪರ್ಕದಲ್ಲಿರುವುದಾಗಿ ಬಿಂಬಿಸಿಕೊಂಡಿದ್ದ ಅಭಿನವ ಹಾಲವೀರಪ್ಪ ಸ್ವಾಮೀಜಿಯನ್ನು ಪರಿಚಯ ಮಾಡಿಕೊಂಡಿದ್ದರು. ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್‌ ಕೊಡಿಸುವಂತೆ ಅವರಿಗೆ ಕೋರಿದ್ದರು. ಅದಕ್ಕಾಗಿ 50 ಲಕ್ಷ, 40 ಲಕ್ಷ ಮತ್ತು 10 ಲಕ್ಷದಂತೆ ವಿವಿಧ ಹಂತದಲ್ಲಿ 1 ಕೋಟಿ ಹಣವನ್ನು ಸ್ವಾಮೀಜಿಗೆ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಎಸ್ಪಿ ಹೇಳಿದ್ದೇನು? 

ʼʼಮುಂಡರಗಿ ಪೊಲೀಸ್‌ ಠಾಣೆಯಲ್ಲಿ ಅಮಾನತುಗೊಂಡಿರುವ ಪಿಡಿಒ  ಸಂಜಯ ಚವಡಾಳ ನೀಡಿದ ದೂರಿನ ಅನ್ವಯ ವಿಚಾರಣೆ ಆರಂಭಿಸಿದ್ದೇವೆ. ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೇಳಿದ್ದ ಸಂಜಯ್‌, ವಿವಿಧ ಹಂತದಲ್ಲಿ ಹಾಲಶ್ರೀಗೆ ನಗದು ರೂಪದಲ್ಲಿ ಹಣವನ್ನ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ಸಂಜಯ್ ಚವಡಾಳಗೆ ನೋಟಿಸ್ ಸಹ ಕೊಟ್ಟಿದೇವೆ. ಸಮಂಜಸ ದಾಖಲೆಗಳನ್ನ ಪೊಲೀಸರಿಗೆ ಸಲ್ಲಿಸುವಂತೆ ನೋಟಿಸ್ ಕೊಟ್ಟಿದೇವೆ. ಇದುವರೆವಿಗೂ ಯಾವುದೇ ದಾಖಲೆಯನ್ನು ದೂರುದಾರರು ನಮಗೆ ಕೊಟ್ಟಿಲ್ಲ. ದಾಖಲೆಗಳನ್ನ ಕೊಟ್ಟ ಮೇಲೆ ಮುಂದಿನ ತನಿಖೆ ಆರಂಭಿಸುತ್ತೇವೆ ʼʼಎಂದು ಗದಗ ಎಸ್​ಪಿ ನೇಮಗೌಡ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News