ಡಾ.ಸುಧಾಮೂರ್ತಿ ಹೆಸರು ಬಳಸಿ ವಂಚನೆ ಆರೋಪ: ಪ್ರಕರಣ ದಾಖಲು

Update: 2023-09-24 17:15 GMT

ಸುಧಾ ಮೂರ್ತಿ | Photo: PTI

ಬೆಂಗಳೂರು, ಸೆ.24: ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರ ಹೆಸರನ್ನು ಬಳಸಿಕೊಂಡು ವಂಚನೆ ನಡೆಸಿರುವ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಇಲ್ಲಿನ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ವಗ್ಗೆ ವರದಿಯಾಗಿದೆ.

ವಂಚನೆಗೆ ಸಂಬಂಧಿಸಿದಂತೆ ಸುಧಾಮೂರ್ತಿ ಅವರ ಆಪ್ತ ಕಾರ್ಯದರ್ಶಿ ಮಮತ ಸಂಜಯ್ ಅವರು ನೀಡಿದ ದೂರಿನ ಅನ್ವಯ ಶೃತಿ ಹಾಗೂ ಲಾವಣ್ಯ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ಸುಧಾಮೂರ್ತಿಯವರ ಫೋಟೋಗಳನ್ನು ಬಳಸಿ ಜಾಹೀರಾತು ನೀಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಟಿಕೆಟ್ ಮಾರಾಟ ಮಾಡಿ ವಂಚಿಸುತ್ತಿದ್ದರು ಎಂದು ಹೇಳಲಾಗಿದೆ.

ಕನ್ನಡ ಕೂಟ ಕ್ಯಾಲಿಫೋರ್ನಿಯಾ(ಕೆಕೆಎನ್‍ಸಿ)ದಿಂದ 50ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲವೆಂದು ಇಮೇಲ್ ಮೂಲಕ ಡಾ.ಸುಧಾಮೂರ್ತಿ ಅವರು ಸಂದೇಶ ಕಳಿಸಿದ್ದರು. ಈ ಮಧ್ಯೆ ಕಿಡಿಗೇಡಿಗಳು ಸಮಯ ಬಳಿಸಿಕೊಂಡು ಸುಧಾಮೂರ್ತಿಯವರ ಫೋಟೋಗಳನ್ನು ಬಳಸಿ ಕನ್ನಡ ಕೂಟ ಕ್ಯಾಲಿಫೋರ್ನಿಯಾ ಕಾರ್ಯಕ್ರಮಕ್ಕೆ ಬರುತ್ತಾರೆಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಿ ಕಾರ್ಯಕ್ರಮದ ಟಿಕೆಟ್ ಮಾರಾಟ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಹೀಗೆ ಅಮೆರಿಕಾದಲ್ಲಿ ʼಮೀಟ್ ಆಂಡ್ ಗ್ರೇಟ್ ವಿತ್ ಡಾ.ಸುಧಾಮೂರ್ತಿʼ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ.

ಹೀಗೆ ವಿವಿಧ ಕಡೆಗಳಲ್ಲಿ ಕಾರ್ಯಕ್ರಮದ ಮೇಲೆ ಸುಧಾಮೂರ್ತಿ ಹೆಸರು ಬಳಸಲಾಗಿದೆ. ಕಾರ್ಯಕ್ರಮದ ಪ್ರತಿ ಟಿಕೆಟ್‍ಗೆ 40 ಡಾಲರ್ ಪಡೆದಿರುವ ಆರೋಪ ಕೇಳಿ ಬಂದಿದೆ. ಈ ರೀತಿ ಸುಧಾಮೂರ್ತಿಯವರಿಗೆ ತಿಳಿಯದೆಯೇ ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವ ಬಗ್ಗೆ ಅನುಮಾನ ಬಂದು ಕಂಪೆನಿಯಲ್ಲಿ ಪ್ರಶ್ನಿಸಿದಾಗ ವಂಚನೆ ಬೆಳಕಿಗೆ ಬಂದಿದೆ.

ಈ ಸಂಬಂಧ ಜಯನಗರ ಠಾಣೆಯಲ್ಲಿ ಐಟಿ ಕಾಯ್ದೆ 66ಸಿ, 66ಡಿ ಹಾಗೂ ಐಪಿಸಿ 419, 420 ಕಾಯ್ದೆಯಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News