ವರ್ಗಾವಣೆ ದಂಧೆ ಆರೋಪ: ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಈ.ಡಿ ಗೆ ದೂರು

Update: 2024-01-23 12:52 GMT

ಬೆಂಗಳೂರು: ಅಬಕಾರಿ ಇಲಾಖೆಯ ಡಿಸಿ, ಡಿವೈಎಸ್ಪಿಗಳಿಂದ ಹಣ ಪಡೆದು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎನ್ನುವ ಆರೋಪದಡಿ ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲಾಗಿದೆ

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಎಂಬವವರು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದಾರೆ.

ಸಚಿವ ಆರ್.ಬಿ.ತಿಮ್ಮಾಪುರ ಅವರು ಲೋಕಸಭಾ ಚುನಾವಣೆಗೆ ಹಣ ಹೊಂದಿಸಲು ಇಲಾಖಾಧಿಕಾರಿಗಳ ವರ್ಗಾವಣೆಗೆ ಲಂಚ ಸ್ವೀಕರಿಸಿದ್ದಾರೆ. ವರ್ಗಾವಣೆ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ 18 ಕೋಟಿ ರೂ. ಲಂಚ ಸ್ವೀಕರಿಸಿದ್ದಾರೆ. ಲಂಚದ ಹಣದಲ್ಲಿ ಸಚಿವರಿಗೆ ಸಿಂಹಪಾಲು ನೀಡಲಾಗಿದೆ.

18 ಕೋಟಿ ರೂ. ಹಣದಲ್ಲಿ 13 ಕೋಟಿ ರೂ. ಸಚಿವರ ಖಾತೆಗೆ ಬಿದ್ದಿದೆ. ಉಳಿದ ಹಣ ಸಹಾಯಕ ಕಾರ್ಯದರ್ಶಿ ಸೇರಿದಂತೆ ಕೋಲಾರ ಅಬಕಾರಿ ಡಿಸಿ ಬಸವರಾಜ ಸಂದಿಗ್ವಾಡ್, ರಂಗಪ್ಪ, ಬೆಂಗಳೂರು ದಕ್ಷಿಣ ಅಬಕಾರಿ ಡಿಸಿ ವಿವೇಕ್ ಖಾತೆಗೆ ತಲುಪಿದೆ. ಲಂಚದ ಹಣದಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಅಬಕಾರಿ ಸಚಿವರ ಲಂಚಾವತಾರಕ್ಕೆ ಸರಕಾರ ಕುಮ್ಮಕ್ಕು ನೀಡುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 13 (1) (2) ರ ಅಡಿಯಲ್ಲಿ ಮತ್ತು ವಿಸ್ಲ್ ಬ್ಲೋವರ್ಸ್ ಆಕ್ಟ್ 2014 ರ ಸೆಕ್ಷನ್ 4 (1) ರ ಅಡಿಯಲ್ಲಿ ಮತ್ತು ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‍ಎ ತಡೆಗಟ್ಟುವಿಕೆ) ಅಡಿಯಲ್ಲಿ ಕಚೇರಿಯ ದುರುಪಯೋಗ ಪಡಿಸಿಕೊಂಡ ಆರೋಪದ ಮೇರೆಗೆ ಕ್ರಮ ಜರುಗಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಮೂವರು ಡಿಸಿ, ಒಂಬತ್ತು ಅಧೀಕ್ಷಕರು, 13 ಡಿವೈಎಸ್‍ಪಿ, 20 ಇನ್‍ಸ್ಪೆಕ್ಟರ್ ಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಅವರಿಂದ 16 ಕೋಟಿ ರೂಪಾಯಿ ಲಂಚ ವಸೂಲಿ ಮಾಡಲಾಗಿದೆ. 2.5ರಿಂದ 3.5 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮತ್ತು ಇನ್ನೊಂದು ತಿಂಗಳಲ್ಲಿ ವರ್ಗಾವಣೆ ಅವಧಿ ಮುಗಿಯುವ ಇನ್‍ಸ್ಪೆಕ್ಟರ್ ಗಳನ್ನು ಬದಲಾಯಿಸಲು ಬೆಂಗಳೂರು ಸುತ್ತಮುತ್ತಲಿನ ಇನ್‍ಸ್ಪೆಕ್ಟರ್ ಗಳಿಂದ 40 ರಿಂದ 50 ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದೆ. ಡಿವೈಎಸ್ಪಿಗಳಿಂದ 30ರಿಂದ 40 ಲಕ್ಷ ರೂ. ಅಧೀಕ್ಷಕರಿಂದ 25ರಿಂದ 30 ಲಕ್ಷ ರೂ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸಿಗಳಿಂದ 2.5 ಕೋಟಿಯಿಂದ 3.5 ಕೋಟಿ ರೂ. ಹೀಗೆ ಒಟ್ಟು 18 ಕೋಟಿ ನಗದು ಸಿಕ್ಕಿದೆ. ಈ ಪೈಕಿ 13 ಕೋಟಿ ರೂ. ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ತಲುಪಿದೆ. ಅಧಿಕೃತ ವಲಯ ಮತ್ತು ಸಾರ್ವಜನಿಕ ಕಾರಿಡಾರ್ ನಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೆ ಸಚಿವರ ಪಿಎ, ಪಿಎಸ್ ಹಾಗೂ ಸಿಬ್ಬಂದಿಗೆ 50 ಲಕ್ಷದಿಂದ 1 ಕೋಟಿ ರೂ ವರ್ಗಾವಣೆಯಾಗಿದೆ ಎಂದು ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News