ಹೆಂಡತಿ ವಿರುದ್ಧ ಪತಿಯ ವ್ಯಭಿಚಾರದ ಆರೋಪಗಳು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್
ಬೆಂಗಳೂರು: ಹೆಂಡತಿ ವ್ಯಭಿಚಾರಿ ಎಂದು ಆರೋಪಿಸಿ, ಮಗುವಿನ ಪಿತೃತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸಿ ವಿಚ್ಛೇದನ ಕೋರಿದ್ದ ಪತಿಯ ನಡೆಯನ್ನು ಮಾನಸಿಕ ಕ್ರೌರ್ಯಕ್ಕೆ ಸಮನಾಗಿದೆ ಎಂದು ಹೈಕೋರ್ಟ್ ಇತ್ತೀಚೆಗೆ ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದೆ.
ಈ ಸಂಬಂಧ ಹೈಕೋರ್ಟ್ ವಿಭಾಗೀಯ ಪೀಠವು ಇಂಥ ನಡವಳಿಕೆಯು ಪತ್ನಿಯು ತನ್ನ ಪತಿಯಿಂದ ದೂರವಿರಲು ಸಾಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ವ್ಯಕ್ತಿಯೊಬ್ಬರಿಗೆ ವಿಚಾರಣಾಧೀನ ನ್ಯಾಯಾಲಯವು 2011ರಲ್ಲಿ ನೀಡಿದ್ದ ವಿಚ್ಛೇದನ ಆದೇಶವನ್ನು ಹೈಕೋರ್ಟ್ ಬದಿಗೆ ಸರಿಸಿದೆ. 2003ರಲ್ಲಿ ಪತಿ ತಮ್ಮ ಮದುವೆ ರದ್ದುಗೊಳಿಸುವಂತೆ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.
ಪತ್ನಿ ತಿಂಗಳಿಗೆ ಕನಿಷ್ಠ 15 ದಿನ ತನ್ನ ಹೆತ್ತವರೊಂದಿಗೆ ವಾಸಿಸುತ್ತಾಳೆ ಮತ್ತು ಆಗಾಗ್ಗೆ ತನ್ನೊಂದಿಗೆ ಜಗಳವಾಡುತ್ತಿದ್ದಳು ಎಂದು ಪತಿ ಆರೋಪಿಸಿದ್ದರು. ಹೆಂಡತಿ ವ್ಯಭಿಚಾರ ಮತ್ತು ಮಾಟಮಂತ್ರ ಮಾಡಿದ್ದಾಳೆ ಎಂದು ಶಂಕಿಸಿದ್ದರು. ಕೌಟುಂಬಿಕ ನ್ಯಾಯಾಲಯವು ಪತಿಯ ವ್ಯಭಿಚಾರದ ಆರೋಪಗಳನ್ನು ತಿರಸ್ಕರಿಸಿದರೂ, ಕ್ರೌರ್ಯದ ಆಧಾರದ ಮೇಲೆ ಪತಿಯ ವಿಚ್ಛೇದನ ಅರ್ಜಿ ಮಾನ್ಯ ಮಾಡಿತ್ತು.
ವಿಚ್ಛೇದನದ ಈ ಆದೇಶವನ್ನು ಪತ್ನಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಪತಿಯ ದೈಹಿಕ ಸ್ಥಿತಿಯನ್ನು ದುರ್ಬಲಗೊಳಿಸಲು ಔಷಧಿಗಳನ್ನು ನೀಡಲಾಗಿದೆ ಎಂಬ ಆರೋಪವನ್ನು ಕುಟುಂಬ ನ್ಯಾಯಾಲಯವು ಯಾವುದೇ ರಕ್ತ ಪರೀಕ್ಷೆ ಅಥವಾ ವಿಧಿವಿಜ್ಞಾನ ಪುರಾವೆಗಳಿಲ್ಲದೆ ಒಪ್ಪಿಕೊಂಡಿದೆ. ಮಾಟಮಂತ್ರ ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ಪತ್ನಿಯ ಪರ ವಕೀಲರು ವಾದಿಸಿದ್ದರು.
ವ್ಯಭಿಚಾರದ ಬಗ್ಗೆ ಪತಿಯು ಆಧಾರರಹಿತ ಆರೋಪ ಮಾಡಿದ್ದಾನೆ ಮತ್ತು ಅದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ತೀರ್ಮಾನಿಸಿದ ನ್ಯಾಯಾಲಯವು, ತನ್ನ ತಪ್ಪಿನ ಲಾಭವನ್ನು ಪಡೆಯಲು ಅವನಿಗೆ ಅನುಮತಿಸಲಾಗದು ಎಂದಿದೆ.
ದಾಖಲೆಯಲ್ಲಿರುವ ಪುರಾವೆಗಳ ಒಟ್ಟಾರೆ ಆಧಾರದಲ್ಲಿ ಹೇಳುವುದಾದರೆ ಪತಿ ತನ್ನ ಹೆಂಡತಿಗೆ ಮಾನಸಿಕ ಕ್ರೌರ್ಯ ಉಂಟುಮಾಡಿದ್ದಾರೆ ಮತ್ತು ಕಾನೂನಿನ ಪ್ರಕ್ರಿಯೆ ದುರುಪಯೋಗಪಡಿಸಿಕೊಳ್ಳುವ ಮೂಲಕ ಕ್ರೌರ್ಯವನ್ನು ಆರೋಪಿಸಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ನಾವು ಭಾವಿಸುತ್ತೇವೆ. ಹೀಗಾಗಿ, ಅವರ ನಡವಳಿಕೆಗೆ ಭಾರಿ ದಂಡ ವಿಧಿಸಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ, ಈ ನೆಲೆಯಲ್ಲಿ ಅಧೀನ ನ್ಯಾಯಾಲಯ ಮಾಡಿದ್ದ ವಿಚ್ಛೇದನ ಆದೇಶ ಬದಿಗೆ ಸರಿಸಿದ ಹೈಕೋರ್ಟ್ ಪತಿಗೆ 10 ಸಾವಿರ ರೂ. ದಂಡ ವಿಧಿಸಿತು.