ಅನಂತಕುಮಾರ್ ಹೆಗಡೆ ‘ಮನುವಿನ ಪಳೆಯುಳಿಕೆ’: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಹಿಂದುಳಿದ ವರ್ಗದ ನಾಯಕರ ಬಗ್ಗೆ ವಿಕೃತ ವಿಷ ತುಂಬಿಕೊಂಡಿರುವ ಅನಂತ ಕುಮಾರ್ ಹೆಗಡೆ ಮನುವಿನ ಪಳೆಯುಳಿಕೆಯಂತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಈ ಅಹಂಕಾರದ ಮೂಲ ಎಲ್ಲಿದೆ ಎಂಬುದು ತಿಳಿಯದ ವಿಷಯವೇನಲ್ಲ, ಈ ಶೋಷಕ ಮನಸ್ಥಿತಿಯ ಠೇಂಕಾರಕ್ಕೆ ಈ ರಾಜ್ಯದ ಉತ್ತರ ನೀಡುತ್ತಾರೆ. ಸಂವಿಧಾನದ ಕಾಲವೇ ಹೊರತು ಮನುಸ್ಮೃತಿಯ ಕಾಲವಲ್ಲ ಎಂಬ ಎಚ್ಚರಿಕೆ ಇದ್ದರೆ ಒಳಿತು ಎಂದು ತಿಳಿಸಿದ್ದಾರೆ.
ಜನರು ಸಂಕಷ್ಟದಲ್ಲಿದ್ದಾಗ ನಿದ್ದೆಯಲ್ಲಿದ್ದು, ಚುನಾವಣೆ ಬಂದಾಗ ಎದ್ದು ಬರುವ ಸಂಸದ ಅನಂತಕುಮಾರ್ ಹೆಗಡೆ, ಇಷ್ಟು ದಿನ ಎಲ್ಲಿ ಮಲಗಿದ್ದಿರಿ? ಸಿದ್ದರಾಮಯ್ಯರನ್ನು ಬೈದರೆ ಟಿಕೆಟ್ ಸಿಗಬಹುದು ಎಂಬ ಭ್ರಮೆಯಲ್ಲಿ ಇದ್ದೀರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸಂಸದರಾಗಿ ಉತ್ತರ ಕನ್ನಡಕ್ಕೆ ನಿಮ್ಮ ಕೊಡುಗೆ ಏನು? ಹಿಂದೆ ಕೌಶಲ್ಯಾಭಿವೃದ್ಧಿ ಸಚಿವರಾಗಿ ನಿಮ್ಮ ಸಾಧನೆ ಏನು? ಎಷ್ಟು ಹಿಂದೂ ಯುವಕರಿಗೆ ಕೌಶಲ್ಯ ನೀಡಿ ಉದ್ಯೋಗ ಕೊಡಿಸಿದ್ದೀರಿ? ಬಹುಶಃ ಪರರನ್ನು ನಿಂದಿಸುವುದೇ ನಿಮ್ಮ ಕೌಶಲ್ಯ ಇರಬಹುದು ಎಂದು ಅವರು ಟೀಕಿಸಿದ್ದಾರೆ.
ಸಿದ್ದರಾಮಯ್ಯನವರು ತಮಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಿದ್ದಾರೆ, ಸಂವಿಧನಾತ್ಮಕವಾಗಿ ಪ್ರಮುಖ ಸ್ಥಾನವಾದ ಸಿಎಂ ಹುದ್ದೆಯಲ್ಲಿದ್ದಾರೆ, ಇಂತಹವರಿಗೆ ಮನಬಂದಂತೆ ಮಾತನಾಡುವುದೇ ನಿಮ್ಮ ಧರ್ಮ ಪಾಲನೆಯೇ? ಅದೇ ನಿಮ್ಮ ಸನಾತನ ಸಂಸ್ಕೃತಿಯೇ? ಆದೇ ನಿಮ್ಮ ಹಿಂದುತ್ವವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬುದ್ಧ, ಬಸವಣ್ಣ, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಕನಕದಾಸರಂತಹ ಮಹಾಪುರುಷರು ಹೇಳಿದ ಧರ್ಮ ನಮ್ಮದು. ಅನಂತ ಕುಮಾರ್ ಹೆಗಡೆಯಂತಹವರು ಧರ್ಮ ರಕ್ಷಣೆ ಮಾಡುವುದಿಲ್ಲ, ಧರ್ಮ ಭಕ್ಷಣೆ ಮಾಡುತ್ತಾರೆ, ಸಮಾಜದಲ್ಲಿ ಅಸಹ್ಯಗಳನ್ನು ಸೃಷ್ಟಿಸುತ್ತಾರೆ. ಹಿಂದೂ ಸಮಾಜ ಇಂತಹವರನ್ನು ಎತ್ತಿ ಎಸೆಯುವುದು ಖಚಿತ ಎಂದು ಅವರು ಹೇಳಿದ್ದಾರೆ.
ಸರ್ವ ಧರ್ಮಗಳ ಜನರಲ್ಲಿ ಬಹುಪಾಲು ಹಿಂದೂಗಳು ತಮ್ಮ ತಾಕತ್ತು ತೋರಿಸಿದ್ದರಿಂದಲೇ ನಮಗೆ 136 ಸ್ಥಾನಗಳ ಅಭೂತಪೂರ್ವ ಗೆಲುವು ಪಡೆದಿದ್ದೇವೆ ಎನ್ನುವುದು ಅನಂತ ಕುಮಾರ್ ಹೆಗಡೆ ಎಂಬ ಅಜ್ಞಾನಿಗೆ ತಿಳಿದಿರಲಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.