"ಬೆಳಗಾವಿ ಎಸ್‍ಡಿಎ ಆತ್ಮಹತ್ಯೆಯಲ್ಲ, ಅದು ಕೊಲೆ": ಎಸಿಪಿ ಕಚೇರಿಗೆ ಅನಾಮಧೇಯ ಪತ್ರ
ಬೆಂಗಳೂರು: ಬೆಳಗಾವಿಯ ತಹಶೀಲ್ದಾರ್ ಕಚೇರಿ ಎಸ್‍ಡಿಎ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿರುವ ಮಧ್ಯೆ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ ಎಂದು ಉಲ್ಲೇಖಿಸಿ ಬರೆದಿರುವ ಅನಾಮಧೇಯ ಪತ್ರವೊಂದು ಎಸಿಬಿ ಕಚೇರಿಗೆ ತಲುಪಿದೆ.
ಬೆಳಗಾವಿಯ ಖಡೇಬಜಾರ್ ಎಸಿಪಿ ಅವರಿಗೆ ಪತ್ರವೊಂದು ತಲುಪಿದ್ದು, ಬಿಳಿ ಹಾಳೆಯ ಮೇಲೆ ಟೈಪಿಸಿ ಪ್ರಿಂಟ್ ತೆಗೆದು, ಲಕೋಟೆಯಲ್ಲಿ ಹಾಕಿ ಖಡೇಬಜಾರ್ ಠಾಣೆಗೆ ಅಂಚೆ ಮೂಲಕ ಕಳುಹಿಸಲಾಗಿದೆ.
ಜತೆಗೆ, ಪ್ರತಿಗಳನ್ನು ರಾಜ್ಯಪಾಲರು, ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಸೇರಿ ಹಲವರಿಗೂ ಕಳುಹಿಸಲಾಗಿದೆ ಎಂದು ಪತ್ರದಲ್ಲಿಯೇ ಉಲ್ಲೇಖ ಮಾಡಲಾಗಿದೆ.
"ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿಲ್ಲ, ಇದು ಕೊಲೆ. ತಹಶೀಲ್ದಾರ್ ಜೀಪ್‍ನ ಚಾಲಕ ಯಲ್ಲಪ್ಪ ಬಡಸದ ಎಂಬಾತನೆ ಕೊಲೆಯ ಸೂತ್ರಧಾರ. ಆ ವಾಹನ ತಪಾಸಣೆ ನಡೆಸುವ ಜತೆಗೆ ಯಲ್ಲಪ್ಪನ ವಿಚಾರಣೆ ಮಾಡಿದರೆ, ಕೊಲೆ ರಹಸ್ಯ ಹೊರಬರುತ್ತದೆ. ಮೃತಪಟ್ಟವರಿಗೆ ನ್ಯಾಯ ಸಿಗಬೇಕು. ಪ್ರಕರಣ ಮುಚ್ಚಿ ಹಾಕಬಾರದು" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ರುದ್ರಣ್ಣ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅನಾಮಧೇಯ ಪತ್ರದ ಬಗ್ಗೆ ಪರಿಶೀಲಿಸಲಾಗುವುದು. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.