ಅಕ್ರಮ, ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಆರ್. ಅಶೋಕ್ ಉತ್ತರಿಸಲಿ: ರಮೇಶ್ ಬಾಬು
ಬೆಂಗಳೂರು: ಸಂಸದ ಸುಧಾಕರ್ ಜೊತೆಗೂಡಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಮೊದಲು ಇವರ ಜಂಟಿ ಅಕ್ರಮ ಹಾಗೂ ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಉತ್ತರಿಸಬೇಕು ಎಂದು ಕೆಪಿಸಿಸಿಯ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಕೋವಿಡ್ ಹಗರಣದಲ್ಲಿ ಮೈಕಲ್ ಡಿಕುನ್ಹಾ ಆಯೋಗದ ವರದಿ ಅನುಗುಣವಾಗಿ ಕಾನೂನು ಕ್ರಮಕ್ಕೆ ಆರ್. ಅಶೋಕ್ ಸಮ್ಮತಿ ನೀಡುವರೇ? ಪದ್ಮನಾಭನಗರ ಶಾಸಕರಾಗಿ ಆರ್. ಅಶೋಕ್ ಪದ್ಮನಾಭನಗರಲ್ಲಿ ಕೆರೆ ಒತ್ತುವವರಿಗೆ ಸಂಬಂಧಪಟ್ಟಂತೆ ರಾಜ್ಯ ಸರಕಾರ ತನಿಖೆ ಮಾಡಲು ಒತ್ತಾಯ ಮಾಡುವರೇ ಎಂದು ಪ್ರಶ್ನಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯಲ್ಲಿ ರಾಜ್ಯ ಸರಕಾರಕ್ಕೆ ಸೇರಿದ ಅಮೃತ್ ಕಾವಲ್ ಪ್ರದೇಶದಲ್ಲಿ ಸುಮಾರು 1,000 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ್ದು, ಇದರ ತನಿಖೆಗೆ ಒತ್ತಾಯಿಸುವರೇ? ಅಂದಿನ ಕಂದಾಯ ಸಚಿವರಾಗಿ ದೊಡ್ಡಬಳ್ಳಾಪುರದ ನೂರಾರು ಕೋಟಿ ರೂಪಾಯಿ ಮೌಲ್ಯದ ಕಂದಾಯ ಜಮೀನಿನ ಅಕ್ರಮ ಹಂಚಿಕೆಗೆ ಸಂಬಂಧಪಟ್ಟಂತೆ ಸಾರ್ವಜನಿಕ ತನಿಖೆಗೆ ಒತ್ತಾಯಿಸುವರೇ ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಪಿಎಸ್‍ಐ ಹಗರಣಗಳ ಮತ್ತು ಕೆಪಿಎಸ್‍ಸಿ ಪರೀಕ್ಷಾ ಅಕ್ರಮಗಳ ಮೇಲೆ ತನಿಖೆಗೆ ಒತ್ತಾಯಿಸುವರೇ? ಹಿಂದಿನ ಬಿಜೆಪಿ ಸರಕಾರದ ಬಿಟ್ ಕಾಯಿನ್ ಹಗರಣದ ತನಿಖೆಗೆ ಆರ್. ಅಶೋಕ್ ಒತ್ತಾಯಿಸುವರೇ? ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಪಟ್ಟಂತೆ ಅಕ್ರಮ ಭೂಮಿ ಹಂಚಿಕೆಯ ಸಂಬಂಧ ತನಿಖೆಗೆ ಒತ್ತಾಯಿಸುವರೇ ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕ ಯತ್ನಾಳ್ ನೀರಾವರಿ ಇಲಾಖೆಗೆ ಸಂಬಂಧಪಟ್ಟಂತೆ 20 ಸಾವಿರ ಕೋಟಿ ರೂಪಾಯಿಗಳ ಆರೋಪವನ್ನು ವಿಜಯೇಂದ್ರರವರ ಮೇಲೆ ಮಾಡಿದ್ದು ಇದರ ತನಿಖೆಗೆ ಒತ್ತಾಯಿಸುವರೇ? ಯತ್ನಾಳ್ ಅವರು ಈ ಸರಕಾರವನ್ನು ಉರುಳಿಸಲು ಒಂದು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಶೇಖರಣೆ ಮಾಡಿರುವುದಾಗಿ ವಿಜಯೇಂದ್ರ ಅವರ ಮೇಲೆ ಮಾಡಿರುವ ಆರೋಪವನ್ನು ತನಿಖೆ ಮಾಡಲು ಒತ್ತಾಯಿಸುವರೇ ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.
ಆರ್. ಅಶೋಕ್ ತಮ್ಮ ಮೇಲೆ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇರುವಂತಹ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಚುನಾವಣಾ ಪ್ರಮಾಣ ಪತ್ರದಲ್ಲಿ ಮುಚ್ಚಿಟ್ಟಿರುತ್ತಾರೆ. ಕೇವಲ ಪ್ರಚಾರಕ್ಕಾಗಿ ರಾಜ್ಯ ಸರಕಾರದ ವಿರುದ್ಧ ಮುಖ್ಯಮಂತ್ರಿಗಳ ವಿರುದ್ಧ ಆರೋಪಗಳನ್ನು ಮಾಡುವ ಬದಲು, ತಮ್ಮ ಆತ್ಮ ಶುದ್ಧೀಕರಣ ಮಾಡಿಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.