ವಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ‘ಎಪಿಎಂಸಿ’ ತಿದ್ದುಪಡಿ ವಿಧೇಯಕ ಅಂಗೀಕಾರ

Update: 2023-07-17 15:53 GMT

ಬೆಂಗಳೂರು, ಎ.17: ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿಯ ಧರಣಿ ನಡುವೆಯೆ ಸೋಮವಾರ ವಿಧಾನಸಭೆಯಲ್ಲಿ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ(ನಿಯಂತ್ರಣ ಮತ್ತು ಅಭಿವೃದ್ಧಿ)(ತಿದ್ದುಪಡಿ) ವಿಧೇಯಕ 2023ಕ್ಕೆ ಅಂಗೀಕಾರ ಲಭಿಸಿತು.

ಭೋಜನ ವಿರಾಮದ ಬಳಿಕ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಮಂಡಿಸಿದ ವಿಧೇಯಕದ ಮೇಲೆ ಆಡಳಿತ ಪಕ್ಷದ ಸದಸ್ಯರಾದ ಟಿ.ಬಿ.ಜಯಚಂದ್ರ, ಬಿ.ಆರ್.ಪಾಟೀಲ್, ಕೆ.ಷಡಕ್ಷರಿ, ಕೆ.ಎಂ. ಶಿವಲಿಂಗೇಗೌಡ, ಬಿಜೆಪಿ ಸದಸ್ಯರಾದ ಸಿದ್ದುಸವದಿ, ಆರಗ ಜ್ಞಾನೇಂದ್ರ, ಜೆಡಿಎಸ್ ಸದಸ್ಯ ಎಚ್.ಡಿ. ರೇವಣ್ಣ ಚರ್ಚೆ ನಡೆಸಿದರು.

2020ರಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಎಪಿಸಿಎಂ ಒಳಗೆ ಹಾಗೂ ಹೊರಗಡೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಇದೀಗ ಕಾಂಗ್ರೆಸ್ ಸರಕಾರವು ಈ ಕಾಯ್ದೆಗೆ ತಿದ್ದುಪಡಿ ತಂದು ರೈತರು ತಮ್ಮ ಬೆಳೆಗಳನ್ನು ಎಪಿಎಂಸಿ ಒಳಗಡೆ ಮಾರಾಟ ಮಾಡುವುದರಿಂದ ರೈತರಿಗೆ ಹೆಚ್ಚಿನ ಆದಾಯ ಹಾಗೂ ಎಪಿಎಂಸಿಗಳ ನಿರ್ವಹಣೆಯು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.

ಎಪಿಎಂಸಿ ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೆ ತರುವ ಬದಲು ರೈತ ಮುಖಂಡರನ್ನು ಕರೆಸಿ ಚರ್ಚೆ ಮಾಡಿ, ರೈತರ ಮನೆ ಹಾಳು ಮಾಡುವ ಕಾಯ್ದೆ ಇದಾಗಿದೆ ಎಂದು ಜೆಡಿಎಸ್ ಸದಸ್ಯ ಎಚ್.ಡಿ.ರೇವಣ್ಣ ಮಾಡಿದ ಟೀಕೆಯಿಂದಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಗದ್ದಲದ ನಡುವೆಯೆ ಸರಕಾರದ ಪರವಾಗಿ ಉತ್ತರಿಸಿದ ಸಚಿವ ಶಿವಾನಂದ ಪಾಟೀಲ್, ಈ ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೆ ತಂದಿಲ್ಲ. ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸುವ ಮುನ್ನವೆ ರಾಜ್ಯ ಸರಕಾರ ಕೃಷಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ತಂದಿತ್ತು. ಅವರು ತಂದಿದ್ದ ತಿದ್ದುಪಡಿಗಳಿಂದ ರೈತರಿಗೆ ಯಾವುದೆ ಲಾಭ ಸಿಗಲಿಲ್ಲ. ರೈತರ ಹಿತದೃಷ್ಟಿಯಿಂದ ನಾವು ಅಗತ್ಯ ತಿದ್ದುಪಡಿಗಳನ್ನು ತಂದಿದ್ದೇವೆ ಎಂದರು.

ಈ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಇದೇ ಸಂದರ್ಭದಲ್ಲಿ ವಿಧೇಯಕಕ್ಕೆ ಧ್ವನಿಮತದ ಅಂಗೀಕಾರ ಲಭಿಸಿತು. ಬಳಿಕ ಸ್ಪೀಕರ್ ಯು.ಟಿ.ಖಾದರ್ ಸದನವನ್ನು 10 ನಿಮಿಷ ಮುಂದೂಡಿದರು.

ಸದನ ಸಮಾವೇಶಗೊಂಡ ಬಳಿಕವು ಪ್ರತಿಪಕ್ಷಗಳು ಧರಣಿ ಮುಂದುವರೆಸಿದರು. ಈ ವೇಳೆ ಮಾತನಾಡಿದ ಎಚ್.ಡಿ.ರೇವಣ್ಣ, ಈ ಕಾಯ್ದೆಗೆ ವಿರೋಧ ಇದೆ ಎಂದು ಹೇಳುತ್ತಿಲ್ಲ. ರೈತ ಮುಖಂಡರನ್ನು ಕರೆಸಿಕೊಳ್ಳಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ನಾರಾಯಣಸ್ವಾಮಿ, ಸದನದಲ್ಲಿ ವಿಧೇಯಕ ಅಂಗೀಕಾರ ಪಡೆದ ಬಳಿಕ ಮತ್ತೆ ಚರ್ಚೆಗೆ ಅವಕಾಶ ಯಾಕೆ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಡಿ.ರೇವಣ್ಣ, ನಾವು ಸ್ಪೀಕರ್ ಕಚೇರಿಯಲ್ಲಿ ಕೆಲವು ಸಲಹೆಗಳನ್ನು ನೀಡಿದ್ದೇವೆ. ಶಿವಾನಂದ ಪಾಟೀಲ್ ಸಹಕಾರಿ ರಂಗದಿಂದ ಬಂದಿದ್ದಾರೆ. ನಮ್ಮ ಉದ್ದೇಶ ರೈತರು ಉಳಿಯಬೇಕು. ಬೆಳಗ್ಗೆ ಹೂವು, ಹಣ್ಣು ತರುವ ಬೆಳೆಗಾರರು ಎಪಿಎಂಸಿಗೆ ಬರುವುದಿಲ್ಲ. ಸಂತೆಯಲ್ಲಿ ಮಾರಾಟ ಮಾಡುತ್ತಾರೆ. ಕೆಲವು ವಿಚಾರಗಳನ್ನು ತಿದ್ದುಪಡಿಯಲ್ಲಿ ತನ್ನಿ, ಸಂತೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿ ಎಂದರು.

ಈ ವೇಳೆ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಸ್ಪೀಕರ್ ಕಚೇರಿಯಲ್ಲಿ ವಿರೋಧ ಪಕ್ಷದ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸುತ್ತೇವೆ. ರೈತ ಮುಖಂಡರನ್ನು ಕರೆಸಿ ಮಾತನಾಡುತ್ತೇವೆ ಎಂದು ಹೇಳಿದ ಬಳಿಕ ಪ್ರತಿಪಕ್ಷಗಳು ಧರಣಿ ಕೈ ಬಿಟ್ಟರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News