ಗುತ್ತಿಗೆ ನೌಕರರಿಗೂ ಗ್ರಾಚ್ಯುಟಿ ಅನ್ವಯ: ಹೈಕೋರ್ಟ್ ಆದೇಶ

Update: 2024-01-02 14:14 GMT

ಬೆಂಗಳೂರು: ಗ್ರಾಚ್ಯುಟಿ ಅಧಿನಿಯಮದ ಪ್ರಕಾರ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುವವರನ್ನು ಸಿಬ್ಬಂದಿ ಎಂಬುದಾಗಿ ಹೇಳಲಾಗಿದೆ. ಆದರಲ್ಲಿ ಗುತ್ತಿಗೆ ನೌಕರ, ಖಾಯಂ ನೌಕರ ಎಂಬುದಾಗಿ ಇಲ್ಲ ಎಂದು ತಿಳಿಸಿರುವ ಹೈಕೋರ್ಟ್, ಸೇವೆ ಖಾಯಂ ಆಗುವುದಕ್ಕೂ ಮುನ್ನ ದಿನದಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದರೆ ಆ ಅವಧಿಗೂ ಸರಕಾರ ಗ್ರಾಚ್ಯುಟಿ ಪಾವತಿಸಬೇಕು ಎಂದು ಆದೇಶಿಸಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ನಿವೃತ್ತ ಸರಕಾರಿ ಶಾಲಾ ಶಿಕ್ಷಕ ಬಸವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಈ ಆದೇಶ ನೀಡಿದೆ.

ಗ್ರಾಚ್ಯುಟಿ ಪಾವತಿ ಸಂಬಂಧ ಗ್ರಾಚ್ಯುಟಿ ಪಾವತಿ ಕಾಯಿದೆ 1972 ಖಾಯಂ ಸರಕಾರಿ ನೌಕರ ಮತ್ತು ಗುತ್ತಿಗೆ ನೌಕರರ ನಡುವೆ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ. ಹೀಗಾಗಿ, 75 ವರ್ಷದ ನಿವೃತ್ತ ಸರಕಾರಿ ನೌಕರರಾಗಿರುವ ಅರ್ಜಿದಾರರಿಗೆ ನಾಲ್ಕು ವಾರದಲ್ಲಿ ಬಾಕಿ ಇರುವ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಬೇಕು.

ಒಂದು ವೇಳೆ ವಿಳಂಬವಾದಲ್ಲಿ ಪ್ರತಿ ದಿನಕ್ಕೆ ಒಂದು ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಸರಕಾರಕ್ಕೆ ಸೂಚನೆ ನೀಡಿ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿದೆ.

ಪ್ರಕರಣವೇನು?: ಅರ್ಜಿದಾರರು ಮಂಡ್ಯ ಜಿಲ್ಲೆಯ ಜಿ.ಮಲ್ಲಿಗೆರೆಯ ಸರಕಾರಿ ಪ್ರೌಢಶಾಲೆಯಲ್ಲಿ ಡಿ ದರ್ಜೆ ಉದ್ಯೋಗಿಯಾಗಿ ದಿನ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ಸರಕಾರ ಅವರ ಸೇವೆಯನ್ನು 1990ರಲ್ಲಿ ಖಾಯಂಗೊಳಿಸಿ ಶಿಕ್ಷಕರ ಹುದ್ದೆ ನೀಡಿತ್ತು ಮತ್ತು ಅವರು 2013ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು.

ಆದರೆ, ಸರಕಾರ ಅವರ ಸೇವೆ ಖಾಯಂ ಆದ ದಿನದಿಂದ ಅಂದರೆ 1990ರಿಂದ 2013ರ ನಡುವಿನ ಅವಧಿಗೆ ಲೆಕ್ಕ ಹಾಕಿ 1.92 ಲಕ್ಷ ರೂ. ಗ್ರಾಚ್ಯುಟಿಯನ್ನು ಮಾತ್ರ ಪಾವತಿಸಿತ್ತು ಮತ್ತು ದಿನದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದ 19 ವರ್ಷಕ್ಕೆ ಗ್ರಾಚ್ಯುಟಿ ಪಾವತಿಸಲು ನಿರಾಕರಿಸಿತ್ತು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಸಿಎಜಿಗೆ ದೂರು ನೀಡಿದ್ದರು. ಸಿಎಜಿ 2015ರಲ್ಲಿ ಉದ್ಯೋಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಅವಧಿಯೂ ಸೇರಿ ಒಟ್ಟಾರೆ 2.44 ಲಕ್ಷ ರೂ. ಗ್ರಾಚ್ಯುಟಿ ಪಾವತಿಗೆ ಆದೇಶ ನೀಡಿತ್ತು. ಆದರೆ ಸರಕಾರ ಪಾವತಿಸದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News