ನಿವೇಶನಗಳಿಗೆ ಹಕ್ಕು ಪತ್ರ ವಿತರಿಸಲು ಕೋರಿ ಅರ್ಜಿ; ಆಶ್ರಯ ಯೋಜನೆ ಜಾರಿಗೊಳಿಸಲಾಗದು ಎಂದ ಹೈಕೋರ್ಟ್

Update: 2023-12-19 16:33 GMT

ಬೆಂಗಳೂರು: ವಸತಿ ರಹಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರ ರೂಪಿಸಿದ್ದ ಯೋಜನೆಯಾದ ಆಶ್ರಯ ಯೋಜನೆಯನ್ನು ಜಾರಿಗೊಳಿಸಲಾಗದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಈ ಯೋಜನೆಯಡಿ ಹಂಚಿಕೆಯಾದ ನಿವೇಶನಗಳಿಗೆ ಹಕ್ಕು ಪತ್ರ ವಿತರಿಸಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೈಸೂರಿನ ಶ್ರೀರಾಮಪುರ ಪಟ್ಟಣ ಪಂಚಾಯಿತಿ ನಿವಾಸಿ ಬಿ.ರೂಪಾ ಸೇರಿದಂತೆ 40 ನಿವಾಸಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿ, ಈ ಆದೇಶ ನೀಡಿದೆ.

ಸಂವಿಧಾನದ 162ನೇ ವಿಧಿಯ ಅಡಿಯಲ್ಲಿ ಲಭ್ಯವಾದ ಕಾರ್ಯಕಾರಿ ಅಧಿಕಾರ ಬಳಕೆ ಮಾಡಿ ರಾಜ್ಯ ಸರಕಾರವು ಆಶ್ರಯ ಯೋಜನೆ ರೂಪಿಸಿದೆ. ಸರಕಾರವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಶ್ರಯ ಯೋಜನೆ ರೂಪಿಸಿದೆ. ಇದರಿಂದ ಯೋಜನೆಯನ್ನು ಜಾರಿ ಮಾಡಲಾಗದು ಮತ್ತು ಯೋಜನೆಯನ್ನು ರದ್ದುಪಡಿಸಲಾಗಿದೆ ಎಂಬುದಾಗಿ ಡಾ.ಬಿ.ಆರ್. ಅಂಬೇಡ್ಕರ್ ದಲಿತ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಗ್ರಾಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಸರಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಘೋಷಣೆ ಮಾಡಿದೆ. ಈ ಕಾನೂನಿನ ಘೋಷಣೆಯು ಸ್ಪಷ್ಟವಾಗಿರುವ ಕಾರಣ, ಆಶ್ರಯ ಯೋಜನೆಯಡಿ ಮೇಲ್ಮನವಿದಾರರಿಗೆ ಯಾವುದೇ ಪರಿಹಾರ ಕಲ್ಪಿಸಲಾಗುವುದಿಲ್ಲ ಎಂದು ವಿಭಾಗೀಯ ಪೀಠ ತನ್ನ ಆದೇಶಲ್ಲಿ ತಿಳಿಸಿದೆ.

ಮೇಲ್ಮನವಿಗೆ ಸಂಬಂಧಿಸಿದ ದಾಖಲೆಗಳ ಮತ್ತು ಏಕ ಸದಸ್ಯ ಪೀಠದ ಆದೇಶವನ್ನು ಪರಿಶೀಲಿಸಿದ ವಿಭಾಗೀಯ ಪೀಠವು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು.

ಪ್ರಕರಣವೇನು?: ಮೈಸೂರು ಕಸಬಾ ಹೋಬಳಿಯ ಶ್ರೀರಾಮಪುರದ ಪಟ್ಟಣ ಪಂಚಾಯತಿ ನಿವಾಸಿಗಳಾದ ಮೇಲ್ಮನವಿದಾರರಾದ ಪ್ರೇಮಾ ಮತ್ತು ಮೈಸೂರಿನ ಇತರ 39 ನಿವಾಸಿಗಳು 2011ರಲ್ಲಿ ಆಶ್ರಯ ಯೋಜನೆಯಡಿ ತಮಗೆ ಮಂಜೂರಾದ ನಿವೇಶನಗಳಿಗೆ ಸಂಬಂಧಿಸಿದಂತೆ ಹಕ್ಕು ಪತ್ರಗಳನ್ನು ನೀಡುವಂತೆ ತಾಲೂಕು ಪಂಚಾಯಿತಿಗೆ ಮನವಿ ಮಾಡಿದ್ದರು.

ಆ ಮನವಿಯನ್ನು ತಿರಸ್ಕರಿಸಿ 2019ರ ಫೆಬ್ರವರಿ 21ರಂದು ತಾಲೂಕು ಪಂಚಾಯಿತಿ ಪತ್ರ ವ್ಯವಹಾರ ನಡೆಸಿತ್ತು. ಅದನ್ನು ರದ್ದುಪಡಿಸಲು ಮತ್ತು ಹಕ್ಕು ಪತ್ರ ಹಂಚಿಕೆ ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ 2019ರಲ್ಲಿ ರೂಪಾ ಮತ್ತಿತರ ಫಲಾನುಭವಿಗಳು ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ 2023ರ ಫೆ.21ರಂದು ಏಕಸದಸ್ಯ ಪೀಠ ಆದೇಶಿಸಿತ್ತು.

ಶ್ರೀರಾಮಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ 2021ರ ಮಾರ್ಚ್ 26ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಹೊರಬೀಳುವ ವೇಳೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಇದರಿಂದ ಆಶ್ರಯ ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿ ಮುಂದುರಿಸಿಲ್ಲ. ಪರಿಣಾಮ ಶ್ರೀರಾಮಪುರ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಫಲಾನುಭವಿಗಳ ಆಯ್ಕೆ ಮತ್ತು ಆಶ್ರಯ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಹೊಸದಾಗಿ ಕೈಗೊಳ್ಳಬೇಕಿತ್ತು.

ಆದರೆ, ಶ್ರೀರಾಮಪುರ ಗ್ರಾಮ ಪಂಚಾಯಿತಿ ಸದ್ಯ ಅಸ್ವಿತ್ವದಲ್ಲಿ ಇಲ್ಲದ ಕಾರಣ ಆಶ್ರಯ ಯೋಜನೆ ನಿವೇಶನಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿಸುವ ಪರಿಸ್ಥಿತಿಯಲ್ಲಿ ಸರಕಾರ ಇಲ್ಲ ಎಂದು ಸರಕಾರಿ ವಕೀಲರು ತಿಳಿಸಿದ್ದಾರೆ. ಇದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಏಕ ಸದಸ್ಯ ಪೀಠ ತನ್ನ ಆದೇಶದಲ್ಲಿತಿಳಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.

..........................

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News