ʼದಿಲ್ಲಿ ಚಲೋʼ ಪ್ರತಿಭಟನೆಗೆ ತೆರಳಿದ್ದ ರಾಜ್ಯದ ರೈತರ ಬಂಧನ: ಸುರಕ್ಷಿತವಾಗಿ ವಾಪಸ್ ಕರೆತರಲು ಪ್ರಯತ್ನ: ಸಚಿವ ಮಹದೇವಪ್ಪ
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ʼದಿಲ್ಲಿ ಚಲೋʼ ಪ್ರತಿಭಟನೆಗೆ ತೆರಳಿದ 70 ಜನ ಕರ್ನಾಟಕದ ರೈತರನ್ನು ಭೋಪಾಲ್‌ನಲ್ಲಿ ಬಂಧಿಸಿದ ಕ್ರಮ ಸರಿಯಲ್ಲ. ಸಾಂವಿಧಾನಿಕ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಸಹಜ. ಬಂಧಿಸಿರುವ ರಾಜ್ಯದ ರೈತರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ಹೇಳಿದರು.
ಶೂನ್ಯ ವೇಳೆಯಲ್ಲಿ ಶಾಸಕ ದರ್ಶನ್ ಪುಟ್ಟಣಯ್ಯ ಅವರ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವರು ಉತ್ತರಿಸಿದರು.
ದಿಲ್ಲಿ ಚಲೋ ಪ್ರತಿಭಟನೆಗೆ ತೆರಳಿದ್ದ ರಾಜ್ಯದ 70 ಜನ ರೈತರನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಂಧಿಸಲಾಗಿದೆ. ಅವರನ್ನು ಉಜ್ಜೈನಿಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಬಂದಿದೆ. ಬಂಧಿತ 70 ಜನ ರೈತರಲ್ಲಿ 25 ಜನ ರೈತ ಮಹಿಳೆಯರು ಸೇರಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಶಾಸಕ ದರ್ಶನ್ ಪುಟ್ಟಣಯ್ಯ ಅವರು ಮನವಿ ಮಾಡಿದರು.
ಸ್ಪೀಕರ್ ಯು.ಟಿ.ಖಾದರ್ ಅವರು ಸಹ ಕೂಡಲೇ ನಮ್ಮ ರಾಜ್ಯ ಸರಕಾರ ವತಿಯಿಂದ ಮಧ್ಯಪ್ರದೇಶ ಸರಕಾರದೊಂದಿಗೆ ಮಾತನಾಡಿ ಸುರಕ್ಷಿತವಾಗಿ ನಮ್ಮ ರಾಜ್ಯದ ರೈತರನ್ನು ವಾಪಸ್ ಕರೆದುಕೊಳ್ಳಲು ಕ್ರಮವಹಿಸುವಂತೆ ನಿರ್ದೇಶನ ನೀಡಿದರು.