ಚಿಕ್ಕಮಗಳೂರು ವಕೀಲ ಪ್ರೀತಂ ಮೇಲೆ ಹಲ್ಲೆ: ಹೈಕೋರ್ಟ್‍ನಿಂದ ಅರ್ಜಿ ಇತ್ಯರ್ಥ
ಬೆಂಗಳೂರು: ‘ಚಿಕ್ಕಮಗಳೂರಿನ ವಕೀಲ ಎನ್.ಟಿ.ಪ್ರೀತಂ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣವನ್ನು ಸರಕಾರ ಸಿಐಡಿ ತನಿಖೆಗೆ ವಹಿಸಿರುವ ಕ್ರಮ ತೃಪ್ತಿಕರವಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧದ ಅರ್ಜಿಯನ್ನು ಬುಧವಾರ ಇತ್ಯರ್ಥಪಡಿಸಿದೆ. ಈ ಸಂಬಂಧ ಬೆಂಗಳೂರು ವಕೀಲರ ಸಂಘದ(ಎಎಬಿ) ಮನವಿ ಆಧರಿಸಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ಈ ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ರಾಜ್ಯ ವಕೀಲರ ಪರಿಷತ್, ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಕೀಲರ ಸಂಘದ ಪ್ರತಿನಿಧಿಗಳ ಜೊತೆ ಇದೇ 9ರಂದು ನಡೆಸಿದ್ದ ಸಭೆಯ ವಿವರವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ‘ರಾಜ್ಯ ಸರಕಾರವು ಪ್ರಕರಣದ ಕುರಿತಂತೆ ಸೂಕ್ತ ಕ್ರಮ ಕೈಗೊಂಡಿದೆ. ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ‘ ಎಂದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಪೀಠ, ‘ತನಿಖೆಯ ಮೇಲ್ವಿಚಾರಣೆ ನ್ಯಾಯಾಲಯದ ಕರ್ತವ್ಯವಲ್ಲ ಮತ್ತು ನಿಗದಿತ ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸುವಂತೆ ನಿರ್ದೇಶಿಸಲು ಸಾಧ್ಯವಿಲ್ಲ. ಹೀಗಾಗಿ, ಅರ್ಜಿಯನ್ನು ಇನ್ನೂ ವಿಚಾರಣೆಗೆ ಉಳಿಸಿಕೊಳ್ಳುವ ಅಗತ್ಯವಿಲ್ಲ’ ಎಂಬ ಅಭಿಪ್ರಾಯದೊಂದಿಗೆ ವಿಲೇವಾರಿ ಮಾಡಿತು.