ಜೂಜಾಟ ಆರೋಪ; ಬಂಧಿತ ಬಣಕಲ್ ಠಾಣೆಯ ಪೊಲೀಸ್ ಪೇದೆ ಅಮಾನತು
ಚಿಕ್ಕಮಗಳೂರು, ಆ.29: ತಾಲೂಕಿನ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಂಚಿಕಲ್‍ದುರ್ಗಾ ಗ್ರಾಮದ ಕಾಡುಮಲ್ಲಿಗೆ ಎಸ್ಟೇಟ್‍ನ ಕಾಫಿ ತೋಟದಲ್ಲಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ರವಿವಾರ ಜಿಲ್ಲಾ ಸೆನ್ ಠಾಣೆ ಪೊಲೀಸರು ದಾಳಿ ನಡೆಸಿ 15 ಆರೋಪಿಗಳನ್ನು ಬಂದಿಸಿದ್ದು, ಬಂಧಿತ ಆರೋಪಿಗಳಲ್ಲಿ ಬಣಕಲ್ ಠಾಣೆಯ ಪೇದೆ ಇರುವುದು ಬೆಳಕಿಗೆ ಬಂದಿದೆ.
ರವಿವಾರ ರಾತ್ರಿ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಂಚಿಕಲ್‍ದುರ್ಗಾ ಗ್ರಾಮದ ಕಾಫಿ ಎಸ್ಟೇಟ್‍ನಲ್ಲಿ ಸುಮಾರು 15 ಮಂದಿ ಜೂಜಾಟದಲ್ಲಿ ನಿರತರಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸೆನ್ ಠಾಣಾಧಿಕಾರಿ ಗವಿರಾಜ್ ನೇತೃತ್ವದ ಅಧಿಕಾರಿ, ಸಿಬ್ಬಂದಿ ತಂಡ ರಾವಿವಾರ ರಾತ್ರಿ ದಿಢೀರ್ ದಾಳಿ ನಡೆಸಿ 15 ಆರೋಪಿಗಳನ್ನು ಬಂಧಿಸಿದ್ದರು. ದಾಳಿ ವೇಳೆ 1.50 ಲಕ್ಷ ರೂ. ನಗದು ಹಾಗೂ 10 ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ದಾಳಿ ವೇಳೆ ಬಂಧನಕ್ಕೊಳಗಾದ 15 ಆರೋಪಿಗಳ ಪೈಕಿ ಓರ್ವ ಆರೋಪಿ ಬಣಕಲ್ ಠಾಣೆಯ ಪೊಲೀಸ್ ಪೇದೆ ಚಂದ್ರಶೇಖರ್ ಎಂದು ತಿಳಿದು ಬಂದಿದ್ದು, ರವಿವಾರ ಕೆಲಸಕ್ಕೆ ರಜೆ ಹಾಕಿ ಇಸ್ಪೀಟ್ ಆಡಲು ತೆರಳಿದ್ದ ಎಂದು ತಿಳಿದು ಬಂದಿದೆ. ಆರೋಪಿ ಪೇದೆ ಚಂದ್ರಶೇಖರ್ ಅವರನ್ನು ಮಂಗಳವಾರ ಅಮಾನತುಗೊಳಿಸಿ ಎಸ್ಪಿ ಡಾ.ವಿಕ್ರಂ ಆಮ್ಟೆ ಆದೇಶಿ ಕ್ರಮ ಜರುಗಿಸಿದ್ದಾರೆ.