ಸಿಎಎ ಮೂಲಕ ಅಹಿಂದ ವರ್ಗಗಳಲ್ಲಿ ಭಯ ಮೂಡಿಸುವ ಯತ್ನ: ಡಾ.ಮಹದೇವಪ್ಪ

Update: 2024-03-12 14:26 GMT

ಬೆಂಗಳೂರು: ಸಿಎಎ ಮತ್ತು ಎನ್‍ಆರ್‌ಸಿ ಗೆ ಸಂಬಂಧಿಸಿದಂತೆ ಈ ಹಿಂದೆ ಜನರಿಂದ ಸಾಕಷ್ಟು ವಿರೋಧ ಎದುರಿಸಿದ್ದ ಕೇಂದ್ರ ಸರಕಾರವು ಗೃಹ ಸಚಿವ ಅಮಿತ್ ಶಾ ಮೂಲಕ ಅಂತಹ ಯಾವುದೆ ಪ್ರಸ್ತಾವವು ಸರಕಾರದ ಮುಂದೆ ಇಲ್ಲವೆಂದು ಹೇಳಿತ್ತು. ಆದರೆ ಇದೀಗ ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಮತ್ತೊಮ್ಮೆ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಗೊಂದಲ ಎಬ್ಬಿಸಿ ಅವರಲ್ಲಿ ಭೀತಿ ಮೂಡಿಸಲು ಪ್ರಯತ್ನಿಸುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ದೂರಿದ್ದಾರೆ.

ಮಂಗಳವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಹಲವು ಬಾರಿ ಹೇಳಿರುವಂತೆ ಪ್ರಜಾಪ್ರಭುತ್ವ ದೇಶವಾದ ಭಾರತವು ಸಾಮರಸ್ಯದ ತತ್ವವನ್ನು ಅಳವಡಿಸಿಕೊಂಡ ನೆಲವಾಗಿದೆ. ಬುದ್ಧನ ಕಾಲದಲ್ಲೇ ಈ ದೇಶವು ಪೌರತ್ವ ಮತ್ತು ಪ್ರಜಾಪ್ರಭುತ್ವವನ್ನು ಅನುಭವಿಸಿದ್ದು ನಮಗೆ ಪೌರತ್ವ ಕೊಡಿ ಎಂದು ಕೇಳುವಂತಹ ದುರ್ಗತಿ ಬರುವುದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಮೂಲತಃ ಶೋಷಿತ ವರ್ಗಗಳ ವಿರೋಧಿಗಳಾಗಿರುವ ಮನುವಾದಿ ಬಿಜೆಪಿಗರು ಕ್ರಮೇಣ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಪಡಿಸಿ ಅವರಲ್ಲಿ ಭೀತಿ ಹುಟ್ಟಿಸಿ ನಂತರ ಅದನ್ನು ದಲಿತರು, ಆದಿವಾಸಿಗಳು ಮತ್ತು ಹಿಂದುಗಳಿದ ವರ್ಗಗಳ ಮೇಲೂ ಆ ಭೀತಿಯನ್ನು ಹೇರುತ್ತಾರೆ ಎಂದು ಮಹದೇವಪ್ಪ ಹೇಳಿದ್ದಾರೆ.

ಹೀಗಾಗಿ ಯಾರಿಗೊ ತೊಂದರೆ ಅಥವಾ ಭೀತಿ ಉಂಟಾದರೆ ನಮಗೇನು ಎಂದು ನಾವು ಈ ದಿನ ಸುಮ್ಮನೇ ಕುಳಿತರೆ ಮುಂದೆ ನಮಗೆ ತೊಂದರೆ ಆದಾಗ ನಮ್ಮ ಪರವಾಗಿ ಹೋರಾಟ ನಡೆಸಲು ಯಾರೂ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು, ದೇಶದ ಒಳಗೆ ಒಡಕು ಮೂಡಿಸುವ ಉದ್ದೇಶದೊಂದಿಗೆ ಜಾರಿಗೊಂಡಿರುವ ಸಿಎಎ ಕಾಯ್ದೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಆಡಳಿತಾತ್ಮಕ ವೈಫಲ್ಯ ಮತ್ತು ಚುನಾವಣಾ ಬಾಂಡ್‍ಗಳ ಚರ್ಚೆಯ ದಿಕ್ಕು ತಪ್ಪಿಸಲು ಮನಸ್ಸಿಗೆ ಬಂದಂತೆ ನಿರ್ಧಾರ ಕೈಗೊಳ್ಳುತ್ತಿರುವ ಬಿಜೆಪಿಗರ ಸರ್ವಾಧಿಕಾರಕ್ಕೆ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಸಮುದಾಯಗಳು ತಕ್ಕ ಪಾಠ ಕಲಿಸಬೇಕು ಎಂದು ಮಹದೇವಪ್ಪ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News