ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ; 50ಕ್ಕೂ ಹೆಚ್ಚು ರೈತರು ವಶಕ್ಕೆ

Update: 2023-11-09 12:21 GMT

ಮೈಸೂರು: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಮಕೃಷ್ಣನಗರದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಗುರುವಾರ ಮುತ್ತಿಗೆಗೆ ಯತ್ನಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರೈತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಕಬ್ಬಿಗೆ ಬೆಂಬಲ ಬಿಡುಗಡೆಗೊಳಿಸಬೇಕು. ರಾತ್ರಿ ಹೊತ್ತು ನೀಡುತ್ತಿರುವ ವಿದ್ಯುತ್ ಅನ್ನು ಹಗಲಲ್ಲೇ ರೈತರಿಗೆ ನೀಡಬೇಕು. ಬರ ಪರಿಹಾರ ಶೀಘ್ರ ಬಿಡುಗಡೆಗೊಳಿಸಬೇಕು. ವೈಜ್ಞಾನಿಕ ಮಾನದಂಡದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕೆಂಬುದು ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾದರು.

ಈ ವೇಳೆ ಅವರ ನಿವಾಸದ ಸಮೀಪ ಬ್ಯಾರಿಕೇಡ್ ಹಾಕಿದ್ದರಿಂದ ಬ್ಯಾರಿಕೇಡ್ ಮುಂಭಾಗವೇ ಧರಣಿ ನಡೆಸಲು ಮುಂದಾದರೂ ಈ ವೇಳೆ ಪ್ರತಿಭಟನೆಗೂ ಅವಕಾಶ ನೀಡದ ಪೊಲೀಸರ ತಂಡ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಯಿತು.

ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸರ ನಡೆಯನ್ನು ರೈತ ನಾಯಕರು ಖಂಡಿಸಿದರಲ್ಲದೆ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮುಂದೆಯೂ ನಾನಾ ರೀತಿಯಲ್ಲಿ ಹೋರಾಟ ಮುಂದುವರೆಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಹಳ್ಳಿಕೆರೆಹುಂಡಿ ಭಾಗ್ಯರಾಜ್,ಕಿರಗಸೂರು ಶಂಕರ್, ರತ್ನಮ್ಮ, ಬಸವರಾಜ್, ಭಾಗ್ಯಮ್ಮ, ಮಹದೇವಮ್ಮ, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News