ಅತ್ತಿಬೆಲೆ ಪಟಾಕಿ ದುರಂತ | ಇನ್ನೋರ್ವ ಗಾಯಾಳು ಮೃತ್ಯು; ಮೃತರ ಸಂಖ್ಯೆ 17ಕ್ಕೆ ಏರಿಕೆ
ಬೆಂಗಳೂರು: ಇಲ್ಲಿನ ಆನೇಕಲ್ ಸಮೀಪದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಅ.7ರಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಯುವಕ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಅಗ್ನಿ ದುರಂತದಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ತಮಿಳುನಾಡಿನ ವಾಯಂಬಾಡಿ ಮೂಲದ ರಾಜೇಶ್ ಮೃತ ಯುವಕ ಎಂದು ಗುರುತಿಸಲಾಗಿದೆ. ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ರಾಜೇಶ್ ಕೂಲಿ ಕೆಲಸಕ್ಕಾಗಿ ಬಂದಿದ್ದರು.
ದುರಂತ ನಡೆದ ದಿನ ಪಟಾಕಿ ಗೋದಾಮಿನಿಂದ 13 ಶವಗಳನ್ನು ಹೊರ ತೆಗೆಯಲಾಗಿತ್ತು. ಆ ಬಳಿ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದರೆ, ಇದೀಗ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್ ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಹಲವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ
ಇನ್ನು ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟೀರಿಯಲ್ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮಲಾನ್ ಆದಿತ್ಯ ಬಿಸ್ವಾಸ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.