ರಾಜ್ಯ ಸರಕಾರದ ಜೊತೆ ಜಪಾನಿನ ಅವೊಯಮಾ ಸೈಸಕುಷೂ ಕಂಪೆನಿ ಒಪ್ಪಂದ

Update: 2024-06-26 13:39 GMT

ನಗೋಯಾ(ಜಪಾನ್) : ತುಮಕೂರಿನ ಬಳಿ ಇರುವ ಜಪಾನ್ ಕೈಗಾರಿಕಾ ಟೌನ್‍ಶಿಪ್‍ನಲ್ಲಿ 210 ಕೋಟಿ ರೂ. ವೆಚ್ಚದಲ್ಲಿ ವಾಹನ ಬಿಡಿಭಾಗಗಳನ್ನು ತಯಾರಿಸುವ ಘಟಕವನ್ನು ಸ್ಥಾಪಿಸುವ ಒಪ್ಪಂದಕ್ಕೆ ಕೈಗಾರಿಕಾ ಸಲಕರಣೆಗಳನ್ನು ತಯಾರಿಸುವ ಜಪಾನಿನ ಅವೊಯಮಾ ಸೈಸಕುಷೂ ಕಂಪೆನಿಯು ಸಹಿ ಹಾಕಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಅವೊಯಮಾ ಸೈಸಕುಷೂ ಕಂಪೆನಿಯ ಅಧ್ಯಕ್ಷ ಯುಕಿಯೋಷಿ ಅವೊಯಮಾ ಒಪ್ಪಂದಕ್ಕೆ ಸಹಿ ಹಾಕಿದರು. ಟೊಯೊಟಾ ಕಂಪೆನಿಯ ವಾಹನ ಬಿಡಿಭಾಗಗಳನ್ನು ತಯಾರಿಸುವ ಅವೊಯಮಾ, ತುಮಕೂರಿನ ಜಪಾನ್ ಕೈಗಾರಿಕಾ ಟೌನ್‍ಶಿಪ್‍ನಲ್ಲಿ ಈ ಘಟಕ ಸ್ಥಾಪಿಸಲು 20 ಎಕರೆ ಭೂಮಿಯನ್ನು ಗುರುತಿಸಿದೆ.

ರಾಜ್ಯದ ನಿಯೋಗವು ವಾಹನ ತಯಾರಿಕಾ ಬಹುರಾಷ್ಟ್ರೀಯ ದೈತ್ಯ ಕಂಪೆನಿ ಟೊಯೊಟೊದ ಮುಖ್ಯಸ್ಥರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಕಂಪೆನಿಯ ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ಟಕಾವೊ ಐಬಾ, ಟೊಯೊಟಾ ಕಿರ್ಲೋಸ್ಕರ್ ಮೋಟರ್ ನ ಹಿರಿಯ ಉಪಾಧ್ಯಕ್ಷ ಸುದೀಪ್ ಎಸ್.ದಳವಿ ಸಮಾಲೋಚನೆಯಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿನ ಟೊಯೊಟಾದ ಭವಿಷ್ಯದ ಹೂಡಿಕೆ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಜಾಗತಿಕ ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಮತ್ತು ರಾಜ್ಯದ ಕೈಗಾರಿಕಾ ಸಾಮರ್ಥ್ಯಗಳನ್ನು ಹೆಚ್ಚಿಸುವ ರಾಜ್ಯ ಸರಕಾರದ ಬದ್ಧತೆಯನ್ನು ಸಚಿವ ಎಂ.ಬಿ.ಪಾಟೀಲ್ ಪುನರುಚ್ಚರಿಸಿದರು. ಟೊಯೊಟಾ ಮತ್ತು ಅವೊಯಮಾ ಕಂಪೆನಿಗಳ ಜೊತೆಗಿನ ಸಮಾಲೋಚನೆಗಳು ಉದ್ಯಮ ಸ್ನೇಹಿ ಸೌಲಭ್ಯಗಳನ್ನು ಒದಗಿಸುವ ರಾಜ್ಯದ ಬದ್ಧತೆಗೆ ನಿದರ್ಶನಗಳಾಗಿವೆ.

ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಹೊಸ ಶುದ್ಧ ಇಂಧನ ಸಂಚಾರ ನೀತಿ ಹಾಗೂ ಗೌರಿಬಿದನೂರು, ಧಾರವಾಡದಲ್ಲಿ ವಾಹನ ತಯಾರಿಕಾ ಉದ್ಯಮದ ನೆರವಿಗಾಗಿ ಎರಡು ದೊಡ್ಡ ಕೈಗಾರಿಕಾ ಸಮೂಹಗಳನ್ನು ಸ್ಥಾಪಿಸಲಾಗುತ್ತಿರುವುದನ್ನು ನಿಯೋಗವು ಟೊಯೊಟಾದ ಮುಖ್ಯಸ್ಥರ ಗಮನಕ್ಕೆ ತಂದಿತು.

ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಟೊಯೊಟಾಕ್ಕೆ ಅಗತ್ಯ ಇರುವ ಎಲ್ಲ ಬಗೆಯ ನೆರವನ್ನು ರಾಜ್ಯ ಸರಕಾರದಿಂದ ಒದಗಿಸಲಾಗುವುದು ಎಂದು ಎಂ.ಬಿ.ಪಾಟೀಲ್ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News