ಕಾಮಗಾರಿ ಹಿನ್ನೆಲೆ: ನೇರಳೆ ಮಾರ್ಗದಲ್ಲಿ ಆ.10ರಿಂದ 3ದಿನ ಬೆಳಗ್ಗೆ ಮೆಟ್ರೋ ಸೇವೆ ಸ್ಥಗಿತ

Update: 2023-08-09 15:42 GMT

ಬೆಂಗಳೂರು, ಆ.9: ನೇರಳೆ ಮಾರ್ಗದಲ್ಲಿ ಕೆಂಗೇರಿ-ಬೈಯಪ್ಪನಹಳ್ಳಿ ನಿಲ್ದಾಣಗಳ ನಡುವೆ ಆ.10, 11 ಹಾಗೂ ಆ.14ರಂದು ಮೂರು ದಿನ ಬೆಳಗ್ಗೆ ರೈಲುಗಳ ಸಂಚಾರ ಸೇವೆಯಲ್ಲಿ ಬದಲಾವಣೆ ಆಗಲಿದೆ ಎಂದು ಬಿಎಂಆರ್‍ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿಯಿಂದ ಕೃಷ್ಣರಾಜಪುರ ಮೆಟ್ರೋ ನಿಲ್ದಾಣದದವರೆಗೆ ಮೆಟ್ರೋ ಸೇವೆಗಳನ್ನು ವಿಸ್ತರಿಸುವ ಸಲುವಾಗಿ ಮೆಟ್ರೋ ನಿಗಮವು ಬೈಯಪ್ಪನಹಳ್ಳಿ ಟರ್ಮಿನಲ್‍ನಿಂದ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣ ಹಾಗೂ ಕೃಷ್ಣರಾಜಪುರ ಮತ್ತು ವೈಟ್‍ಫೀಲ್ಡ್(ಕಾಡುಗೋಡಿ) ನಿಲ್ದಾಣಗಳವರೆಗೆ ಆ.9ರಂದು ಬೆಳಗ್ಗೆ 5ರಿಂದ 7 ಗಂಟೆವೆರೆಗೆ ರೈಲು ಸೇವೆ ಸ್ಥಗಿತಗೊಳಿಸಲಾಗಿತ್ತು.

ಸದರಿ ಕಾಮಗಾರಿ ಮತ್ತೆ ಆರಂಭಿಸುವ ಹಿನ್ನೆಲೆಯಲ್ಲಿ ಆ.10 ಮತ್ತು 11ರಂದು ಬೆಳಗ್ಗೆ 5ರಿಂದ 7ರವರೆಗೆ ರೈಲು ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದೇ ಅವಧಿಯಲ್ಲಿ ಬೆಳಗ್ಗೆ 5ರಿಂದ 7ವರೆಗೆ ಸ್ವಾಮಿ ವಿವೇಕಾನಂದ ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿ ನಿಲ್ದಾಣದವರೆಗೆ(ನೇರಳೆ ಮಾರ್ಗ) ಮೆಟ್ರೋ ರೈಲುಗಳ ಸೇವೆಗಳು ಲಭ್ಯವಿರುತ್ತದೆ ಎಂದು ನಿಗಮ ತಿಳಿಸಿದೆ.

ವಿಜಯನಗರ-ಕೆಂಗೇರಿ ಸೇವೆ ವ್ಯತ್ಯಯ: ಇನ್ನೂ ಕೆಂಗೇರಿಯಿಂದ ಚಲ್ಲಘಟ್ಟ ನಿಲ್ದಾಣದವರೆಗೆ ರೈಲು ಸೇವೆಯನ್ನು ವಿಸ್ತರಿಸಲು ಸಿಗ್ನಲಿಂಗ್ ಮತ್ತು ಇತರ ಸಂಬಂಧಿತ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ, ಆ.14ರಂದು ಬೆಳಗ್ಗೆ 5ರಿಂದ 7ರವರೆಗೆ ಕೆಂಗೇರಿ-ವಿಜಯನಗರ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಸ್ಥಗಿತಗೊಳ್ಳಲಿದೆ. ಇದೇ ಅವಧಿಯಲ್ಲಿ ವಿಜಯನಗರದಿಂದ ಬೈಯಪ್ಪನಹಳ್ಳಿ ವರೆಗೆ ಮೆಟ್ರೋ ಸೇವೆ ಇರಲಿದೆ.

ಇನ್ನು ಈ ಮೂರು ದಿನಗಳಲ್ಲಿ ಬೆಳಗ್ಗೆ 7 ಗಂಟೆ ನಂತರ ಬೈಯಪ್ಪನಹಳ್ಳಿ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಹಾಗೂ ಕೆ.ಆರ್.ಪುರಂನಿಂದ ವೈಟ್‍ಫೀಲ್ಡ್(ಕಾಡುಗೋಡಿ) ಮೆಟ್ರೋ ನಿಲ್ಯಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆಗಳು ರಾತ್ರಿ 11ಗಂಟೆವರೆಗೆ ಲಭ್ಯವಿರುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News