FACT CHECK | ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಪ್ರತಿಭಟನೆಯ ಚಿತ್ರವನ್ನು ಮಂಡ್ಯದ್ದು ಎಂದು ಸುಳ್ಳುಸುದ್ದಿ ಹರಡಿದ ಬಿಜೆಪಿ, ಬಲಪಂಥೀಯರು
ಬೆಂಗಳೂರು : ಮಂಡ್ಯದ ನಾಗಮಂಗಲ ಗಣೇಶ ವಿಸರ್ಜನೆಯ ವೇಳೆ ನಡೆದ ಗಲಾಟೆಯ ಹಿನ್ನೆಲೆಯಲ್ಲಿ, ಶುಕ್ರವಾರ ಬೆಂಗಳೂರಿನ ಟೌನ್ ಹಾಲ್ ಬಳಿ ಸಂಘಪರಿವಾರದ ಕಾರ್ಯಕರ್ತರು ಗಣೇಶ ಮೂರ್ತಿಯನ್ನು ತಂದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ವೇಳೆ ಪೋಲಿಸರು ಸಂಘಪರಿವಾರದ ಕಾರ್ಯಕರ್ತರ ಕೈಯ್ಯಲ್ಲಿದ್ದ ಗಣೇಶ ಮೂರ್ತಿಯನ್ನು ವಶಪಡಿಸಿಕೊಂಡು, ಆ ಬಳಿಕ ವಿಸರ್ಜನೆ ಮಾಡಿದ್ದರು.
ಪೊಲೀಸರು ವಶಪಡಿಸಿಕೊಂಡ ಗಣೇಶ ಮೂರ್ತಿಗೆ ಕೋಮು ಲೇಪನ ಹಚ್ಚಿದ್ದ ಬಿಜೆಪಿ, ಬಲಪಂಥಿಯರು ಆಡಳಿತಾರೂಢ ಕಾಂಗ್ರೆಸ್ ಸರಕಾರವು ಹಿಂದೂ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಘಟನೆಯ ಕುರಿತು ಪೋಸ್ಟ್ ಮಾಡಿದ್ದ ಕರ್ನಾಟಕ ಬಿಜೆಪಿಯು, ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಕಾಂಗ್ರೆಸ್ ಸರ್ಕಾರ ರಾಹು ಕಾಲಕ್ಕೆ ಗಣೇಶ ಮೂರ್ತಿಗಳನ್ನು ಬಂಧಿಸಿದೆ. ಹಿಂದೂ ವಿರೋಧಿ @INCKarnataka ಸರ್ಕಾರ ಅದೆಷ್ಟರಮಟ್ಟಿಗೆ ಲಜ್ಜೆ ಬಿಟ್ಟು ನಿಂತಿದೆ ಎನ್ನುವುದಕ್ಕೆ ಗಣೇಶ ಮೂರ್ತಿಯನ್ನೇ ಬಂಧಿಸಿ ಪೊಲೀಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿರುವುದೇ ಸಾಕ್ಷಿ! ಇಷ್ಟು ದಿನ ಹಿಂದೂಗಳ ಮೇಲೆ ದಾಳಿ ಮಾಡಿಸುವುದು, ಹಿಂದೂಗಳ ಭೂಮಿ ಕಬಳಿಸುವುದು, ಹಿಂದೂಗಳನ್ನು ಬಂಧಿಸುವುದು, ಹಿಂದೂಗಳನ್ನು ಹತ್ತಿಕ್ಕುತ್ತಿದ್ದ ಭ್ರಷ್ಟ ಸಿಎಂ @siddaramaiah ಅವರು ಗಣೇಶ ಮೂರ್ತಿಗಳನ್ನೇ ಬಂಧಿಸಿರುವುದು "ರಾಹು ಕಾಲ" ಶೀಘ್ರದಲ್ಲೇ ಕೊನೆಯಾಗಲಿದೆ ಎಂಬುದರ ಮುನ್ಸೂಚನೆ! ಎಂದು ತಿಳಿಸಿತ್ತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಸಹಿತ ಹಲವು ಬಿಜೆಪಿ ನಾಯಕರು ಈ ಘಟನೆಗೆ ಸುಳ್ಳು ಆಯಾಮ ನೀಡಿದ್ದರು. ಘಟನಾ ಸ್ಥಳದ ಬಗ್ಗೆ ಮಾಹಿತಿಯೇ ಇಲ್ಲದ ಶೋಭಾ ಕರಂದ್ಲಾಜೆ, ಈ ಘಟನೆ ಮಂಡ್ಯದಲ್ಲಿ ನಡೆದದ್ದು ಎಂದು ಸುಳ್ಳು ಸುದ್ದಿ ಹರಡಿದ್ದಾರೆ.
ಘಟನೆಯ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, “ಕರ್ನಾಟಕದ ಮಂಡ್ಯದಲ್ಲಿ ಪ್ರಥಮ ಪೂಜ್ಯ ಗಣೇಶನನ್ನು ಪೊಲೀಸರು ಬಂಧಿಸಿದ್ದಾರೆ! ಮೆರವಣಿಗೆ ವೇಳೆ ದೇಶವಿರೋಧಿಗಳು ಗಣೇಶ ಮೂರ್ತಿಗೆ ಕಲ್ಲು ಮತ್ತು ಚಪ್ಪಲಿ ಎಸೆದು 25ಕ್ಕೂ ಹೆಚ್ಚು ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಅವರು ಅಪರಾಧಿಗಳನ್ನು ರಕ್ಷಿಸಿ ಘಟನೆಯನ್ನು ಮುಚ್ಚಿಹಾಕುತ್ತಿದ್ದಾರೆ. ಬೆನ್ನೆಲುಬು ಇಲ್ಲದ ಪೊಲೀಸರು ಪೊಲೀಸ್ ವ್ಯಾನ್‌ನಲ್ಲಿ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳು ನಿರ್ಲಕ್ಷಿಸಲ್ಪಟ್ಟಿದ್ದಾರೆ!!” ಎಂದು ಪೋಸ್ಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಫ್ಯಾಕ್ಟ್ ಚೆಕ್ ನಡೆಸುವ ಆಲ್ಟ್ ನ್ಯೂಸ್ ನ ಪತ್ರಕರ್ತ ಮುಹಮ್ಮದ್ ಝುಬೇರ್, “ನೀವು ಹಂಚಿರುವ ಫೋಟೋಗಳು ಮಂಡ್ಯದ್ದಲ್ಲ, ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದದ್ದು” ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
“ದಾರಿ ತಪ್ಪಿಸುವುದನ್ನು ನಿಲ್ಲಿಸಿ. ಈ ಚಿತ್ರಗಳು ಮಂಡ್ಯದ್ದಲ್ಲ. ಬೆಂಗಳೂರಿನ ಟೌನ್ ಹಾಲ್ ಮುಂದೆ ನಡೆದ ಘಟನೆಯ ಚಿತ್ರಗಳು ಎಂಬುದು ವಾಸ್ತವ. ಟೌನ್ ಹಾಲ್ ಬಳಿ ಬಂದಿದ್ದ ಪ್ರತಿಭಟನಾಕಾರರಿಂದ ಗಣೇಶ ಮೂರ್ತಿಯನ್ನು ರಕ್ಷಿಸಿರುವ ಪೊಲೀಸರು, ನಂತರ ತಾವೇ ಅದನ್ನು ವಿಸರ್ಜಿಸಿದ್ದಾರೆ” ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಉದ್ಯಾನವನ ಬಿಟ್ಟು ಬೇರೆಲ್ಲೂ ಪ್ರತಿಭಟನೆ ನಡೆಸುವಂತಿಲ್ಲ. ಆದರೆ, ಈ ನಿಯಮಗಳನ್ನು ಉಲ್ಲಂಘಿಸಿ, ಸಂಘ ಪರಿವಾರದ ಕಾರ್ಯಕರ್ತರು ಗಣೇಶ ಮೂರ್ತಿಯನ್ನು ಮುಂದಿಟ್ಟು ಪ್ರತಿಭಟಿಸಲು ಮುಂದಾಗಿದ್ದರಿಂದ, ಪೊಲೀಸರು ಅವರೆಲ್ಲರನ್ನೂ ಬಂಧಿಸಿದ್ದರು.