ಬೆಂಗಳೂರು | ಸ್ನೇಹಿತನಿಗೆ 65 ಲಕ್ಷ ರೂ.ವಂಚಿಸಿದ ಆರೋಪ: ಪ್ರಕರಣ ದಾಖಲು
ಬೆಂಗಳೂರು: ಸ್ನೇಹಿತನಿಗೆ ಬೆದರಿಸಿ 65 ಲಕ್ಷ ರೂ.ಪಡೆದು ವಂಚಿಸಿರುವ ಆರೋಪದಡಿ ಸಹೋದರರಿಬ್ಬರ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.
ಅಕ್ಷಯ್ ಕುಮಾರ್ ಹಾಗೂ ಭರತ್ ಎಂಬ ಸಹೋದರರಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಗರದ ಬಿಟಿಎಂ ಲೇಔಟ್ ನಿವಾಸಿಗಳಾದ ಅಕ್ಷಯ್ ಕುಮಾರ್ ಹಾಗೂ ಭರತ್, ಸುಮಾರು 18 ವರ್ಷಗಳಿಂದ ಶಿವಮೊಗ್ಗ ಮೂಲದ ಟೆಕ್ಕಿಯೊಬ್ಬನ ಸ್ನೇಹಿತರಾಗಿದ್ದರು. ಸ್ನೇಹಿತ ಒಳ್ಳೆಯ ಕೆಲಸದಲ್ಲಿದ್ದಾನೆ ಆತನಿಂದ ಹಣ ವಸೂಲಿ ಮಾಡಬಹುದು ಎಂದು ಸಂಚು ರೂಪಿಸಿ, ‘ಅಪರಿಚಿತ ವ್ಯಕ್ತಿ ಬಳಿ ನಿನ್ನ ಖಾಸಗಿ ಫೋಟೋಗಳಿವೆ. ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಬೆದರಿಸುತ್ತಿದ್ದಾನೆ. ಅವನಿಗೆ 12 ಲಕ್ಷ ರೂ. ಕೊಟ್ಟರೆ ಪೋಟೋಗಳನ್ನು ಹಿಂಪಡೆಯಬಹುದು’ ಎಂದು ನಂಬಿಸಿದ್ದಾರೆ. ಸ್ನೇಹಿತರ ಮಾತು ನಂಬಿದ ಟೆಕ್ಕಿ ಹಣ ಕೊಟ್ಟಿದ್ದಾನೆ. ಬಳಿಕ ಹಂತ ಹಂತವಾಗಿ ಟೆಕ್ಕಿಯಿಂದ ಹಣ ಪಡೆದುದಲ್ಲದೇ ಆತನ ಸಹೋದರಿಯನ್ನೂ ನಂಬಿಸಿ ಆರೋಪಿಗಳು ಹಣ ಪಡೆದುಕೊಂಡಿದ್ದಾರೆ.
ಸ್ನೇಹಿತರ ಮಾತು ನಂಬಿದ್ದ ಟೆಕ್ಕಿ, ಮನೆಯವರು, ಸ್ನೇಹಿತರು, ಬ್ಯಾಂಕ್‍ನಲ್ಲಿ ಸಾಲ ಮಾಡಿ 65 ಲಕ್ಷ ರೂಪಾಯಿ ನೀಡಿದ್ದಾರೆ. ಇಷ್ಟಾದರೂ ಆರೋಪಿಗಳ ವಂಚನೆ ಮುಂದುವರೆದಾಗ ಅನುಮಾನಗೊಂಡ ಟೆಕ್ಕಿ, ನಗರದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಸಹೋದರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.