ಬೆಂಗಳೂರು | ಅತ್ತಿಬೆಲೆ ಪಟಾಕಿ ದುರಂತ; ಮೃತರ ಸಂಖ್ಯೆ 13ಕ್ಕೆ ಏರಿಕೆ, ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

Update: 2023-10-08 03:43 GMT

ಬೆಂಗಳೂರು:  ಪಟಾಕಿ ದುರಂತ ನಡೆದ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪದ ಅತ್ತಿಬೆಲೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶನಿವಾರ ರಾತ್ರಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ʼʼದುರಂತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ. ಮೃತರ ಕುಟುಂಬಕ್ಕೆ ಸರಕಾರದಿಂದ ತಲಾ 5 ಲಕ್ಷ ಪರಿಹಾರ ನೀಡಲಾಗುವುದುʼʼ ಎಂದು ತಿಳಿಸಿದರು.

ʼʼದುರಂತ ಸ್ಥಳದಲ್ಲಿ 20 ಮಂದಿ ಇದ್ದರು. ನಾಲ್ವರು ತಪ್ಪಿಸಿಕೊಂಡಿದ್ದಾರೆ. 13 ಮಂದಿಯ ಶವ ಪತ್ತೆಯಾಗಿದೆ. ಉಳಿದವರು ಏನಾದರೂ ಎಂದು ತನಿಖೆ ನಡೆಸಲಾಗುತ್ತಿದೆ. ಹಿಂದಿನ ಕಟ್ಟಡದಲ್ಲಿ ಏನಾದರೂ ಇದ್ದಾರೆಯೇ? ಬೇರೆ ಎಲ್ಲಾದರೂ ಹೋದರೆ? ಹಿಂದಿನ ಕಟ್ಟಡದಲ್ಲೂ ಪಟಾಕಿಗಳು ಇವೆಯಂತೆ. ಅದೂ ಅಪಾಯಕಾರಿ. ಹೀಗಾಗಿ ಎಚ್ಚರಿಕೆಯಿಂದ ಬಾಗಿಲು ತೆರೆಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆʼʼ ಎಂದರು.

ʼʼದುರಂತದ ಬಗ್ಗೆ ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಮಾಲಕರು ಕೂಡ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಅಗ್ನಿ ಅನಾಹುತ ತಡೆವ ನಿಯಮಗಳನ್ನು ಪಾಲಿಲಾಗಿದೆಯೇ? ಲೋಪದೋಷಗಳು ಏನಾದರೂ ಇವೆಯೇ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಈ ಅನಾಹುತದಿಂದ ಬೆಂಗಳೂರು ಚನ್ನೈ ಎರಡೂ ಕಡೆ ವಾಹನಗಳ ಸಂಚಾರಕ್ಕೆ ತೊಂದರೆ ಆಗಿತ್ತು. ಟ್ರಾಫಿಕ್ ಜಾಮ್ ಆಗಿತ್ತು. ಈಗ ವಾಹನ ದಟ್ಟಣೆ ನಿವಾರಿಸಲಾಗಿದ್ದು, ಸಂಚಾರ ಸುಗಮವಾಗಿದೆʼʼ ಎಂದು ಅವರು ತಿಳಿಸಿದರು.

ʼದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಟಾಕಿ ಅಂಗಡಿಗಳು, ಗೋಡೌನ್ ಗಳಲ್ಲಿ ಅಗ್ನಿ ಅನಾಹುತ ನಿಯಂತ್ರಣ ನಿಯಮಗಳ ಪಾಲನೆ ಬಗ್ಗೆ ಮುಂಜಾಗರೂಕ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆʼ ಎಂದು ಅವರು ಹೇಳಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News