ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಫೆ.1ಕ್ಕೆ ‘ಬೆಂಗಳೂರು ಚಲೋ’

Update: 2024-01-27 14:53 GMT

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.1ಕ್ಕೆ ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಿಳಿಸಿದೆ.

ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‍ನ ಅಧ್ಯಕ್ಷ ಬಿ.ಅಮ್ಜದ್ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ 15ಸಾವಿರ ರೂ., ಸಹಾಯಕಿಯರಿಗೆ 10 ಸಾವಿರ ರೂ.ಗೌರವಧನ ಹೆಚ್ಚಿಸಬೇಕು. ನಿವೃತ್ತರಿಗೆ 3 ಲಕ್ಷ ರೂ.ಇಡುಗಂಟು ಜಾರಿಗೊಳಿಸಬೇಕು. ಇದನ್ನು ಸರಕಾರ ಆರನೇ ಗ್ಯಾರೆಂಟಿಯಾಗಿ ಘೋಷಿಸಬೇಕು ಎಂದು ಹೇಳಿದರು.

ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಗ್ರಾಚ್ಯುಟಿ ಪಡೆಯಲು ಅರ್ಹರು ಎಂಬ ಸುಪ್ರೀಂ ಕೋರ್ಟಿನ ತೀರ್ಪನ್ನು ಈಗಾಗಲೇ ಹಿಂದೆ ನಿವೃತ್ತಿ ಆಗಿರುವವರೆಲ್ಲರಿಗೂ ಅನ್ವಯಿಸುವಂತೆ ನೀಡಲು ಆಡಳಿತಾತ್ಮಕವಾಗಿ ಗ್ರಾಚುಟಿ ತೀರ್ಪನ್ನು ಜಾರಿಗೊಳಿಸಬೇಕು. 2023ರ ಎ.1ರಿಂದ ನಿವೃತ್ತಿಯಾದವರಿಗೆ ಗ್ರಾಚ್ಯುಟಿ ನೀಡಬೇಕೆಂಬ ಆದೇಶವನ್ನು ಹಿಂದಿನ ಸರಕಾರ ನೀಡಿದೆ. ಅಂದಿನಿಂದ ಇಲ್ಲಿಯವರೆವಿಗೂ ಸುಮಾರು 2500ಕಾರ್ಯಕರ್ತರು ಸಹಾಯಕಿಯರು ನಿವೃತ್ತಿಯಾಗಿದ್ದಾರೆ. ಯಾರಿಗೂ ಗ್ರಾಚ್ಯುಟಿ ಹಣ ಕೊಟ್ಟ್ಟಿಲ್ಲ. ಹೀಗಾಗಿ ಇಲಾಖೆ ಕೂಡಲೇ ಬಿಡುಗಡೆ ಮಾಡಬೇಕು ಎಂದರು.

ತೀವ್ರ ಸ್ವರೂಪದ ಅನಾರೋಗ್ಯ ಪೀಡಿತರಾಗಿರುವವರಿಗೆ ಪರಿಹಾರಧನ 3ಲಕ್ಷ ರೂ.ನೀಡಿ ಸ್ವಯಂ ನಿವೃತ್ತಿಗೆ ಅವಕಾಶ ನೀಡುವಂತೆ ಹಿಂದಿನ ಬಜೆಟ್‍ನಲ್ಲಿ ಘೋಷಿಸಲಾಗಿದೆ. ಅದನ್ನು ಜಾರಿಮಾಡಬೇಕು. ಮೊಟ್ಟೆ ಸರಬರಾಜಿನ ಟೆಂಡರ್ ರದ್ದುಗೊಳಿಸಿ, ಬಾಲವಿಕಾಸ ಸಮಿತಿಯ ಖಾತೆಗೆ ಮೊಟ್ಟೆ ಖರೀದಿಸಲು ಮುಂಗಡವಾಗಿ ಹಣ ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಅಂಗನವಾಡಿಗಳಿಗೆ ಪರ್ಯಾಯವಾಗಿ ಸರಕಾರದ ವಿವಿಧ ಇಲಾಖೆಗಳು ಶಿಶುಪಾಲನಾ, (ಕಟ್ಟಡಕಾರ್ಮಿಕ ಇಲಾಖೆ, ಗ್ರಾಮೀಣಾಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ಬಿಬಿಎಂಪಿಗಳಲ್ಲಿ) ಕೇಂದ್ರಗಳು ತೆರೆಯುತ್ತಿವೆ. 4 ರಿಂದ 5 ವರ್ಷ ವಯೋಮಾನದ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ತರಗತಿಗಳನ್ನು ತೆರೆಯುವುದನ್ನು ಕೈಬಿಟ್ಟು ಅಂಗನವಾಡಿಗಳನ್ನು ಬಲಗೊಳಿಸಬೇಕು ಎಂದು ಬಿ. ಅಮ್ಜದ್ ಹೇಳಿದರು.

ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕೆಲಸಕ್ಕೆ ನೇಮಕ ಮಾಡಿದಾಗ ನೀಡುವ ಆದೇಶದಲ್ಲಿ ‘ತಾತ್ಕಾಲಿಕ’ ನೇಮಕಾತಿ ಎಂಬ ಪದವನ್ನು ಕೈಬಿಡಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಲ್ಲಿ ದೀರ್ಘಕಾಲ(5ರಿಂದ 10ವರ್ಷ ಮೇಲ್ಪಟ್ಟು) ಒಂದೇ ಜಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಮೇಲ್ವಿಚಾರಕರು, ಹಾಗೂ ಸಿಬ್ಬಂದಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿಯಾಮಾನುಸಾರ ವರ್ಗಾವಣೆಗೊಳಿಸಬೇಕು ಎಂದು ಅವರು ತಿಳಿಸಿದರು.

ಮಾತೃ ವಂದನಾ ಪ್ರೋತ್ಸಾಹಧನ ಬಾಕಿ ಇರುವುದನ್ನು ಬಿಡುಗಡೆ ಮಾಡಬೇಕು. ಸ್ರೀಶಕ್ತಿ ಮಾಹಿತಿಯನ್ನು ಕಾರ್ಯಕರ್ತೆಯರು ಕೊಡಲು ಸಾಧ್ಯವಿಲ್ಲ. ಏಕೆಂದರೆ ಯಾವುದೇ ಪ್ರೋತ್ಸಾಹಧನ ಕೊಡುತ್ತಿಲ್ಲ. ಇಲಾಖೆ ಈ ಕುರಿತು ಕಮಿಟಿ ರಚಿಸಿದೆ, ಹೀಗಾಗಿ ಕಮಿಟಿಯವರಿಗೆ ಜವಾಬ್ದಾರಿ ಕೊಟ್ಟು ಮಾಹಿತಿ ಪಡೆಯುವಂತೆ ಆದೇಶ ನೀಡಬೇಕು ಎಂದು ಅವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News