ಬೆಂಗಳೂರು | ʼಹಜ್ ಯಾತ್ರಿʼಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ಬೆಂಗಳೂರು : ಮಂಗಳೂರು ಮತ್ತು ಕಲಬುರಗಿಯಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಅನುದಾನ ಒದಗಿಸಲಾಗಿದೆ. ಕಲಬುರಗಿಯಲ್ಲಿ ಸ್ಥಳ ಸಿಗದೆ ವಿಳಂಬವಾಗಿದೆ. ಮಂಗಳೂರಿನಲ್ಲಿ ಸ್ಥಳ ಗುರುತಿಸಲಾಗಿದ್ದು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಮುಗಿದ ಮೇಲೆ ಗುದ್ದಲಿ ಪೂಜೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ ಹೆಗಡೆ ನಗರ ಸಮೀಪದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ರಾಜ್ಯ ಹಜ್ ಸಮಿತಿಯ ಮುಖಾಂತರ ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳ ತಂಡಕ್ಕೆ ಬೀಳ್ಕೊಡುಗೆ ಕೊಟ್ಟ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
"ರಾಜ್ಯ ಹಜ್ ಸಮಿತಿ ಮೂಲಕ ತೆರಳುತ್ತಿರುವ 10,168 ಯಾತ್ರಿಗಳ ಪ್ರಯಾಣ ಸುಖಕರವಾಗಿರಲಿ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆ ನೆಲೆಸಲಿ ಎಂದು ಪ್ರಾರ್ಥಿಸುವಂತೆ ಯಾತ್ರಿಗಳಿಗೆ ತಿಳಿಸಿದ್ದೇನೆ. ಕುವೆಂಪು ಹೇಳಿದಂತೆ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಲು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಧರ್ಮದವರೆಲ್ಲಾ ಒಂದು ತಾಯಿಯ ಮಕ್ಕಳಂತೆ ಇರಬೇಕು" ಎಂದು ಸಿದ್ದರಾಮಯ್ಯ ಹೇಳಿದರು.
ʼಅಂತಹ ವಾತಾವರಣ ನಿರ್ಮಾಣವಾಗಬೇಕಾದರೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಬಂದು ಎಲ್ಲರೂ ಸಬಲರಾಗಬೇಕು. ಅದಕ್ಕೆ ಹಜ್ ಯಾತ್ರಿಗಳು ಪ್ರಾರ್ಥಿಸಲಿ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಬೆಳೆ ಬರಲಿ, ನಾಡು ಸಮೃದ್ಧವಾಗಲಿʼ ಎಂದು ಪ್ರಾರ್ಥಿಸುವಂತೆ ಎಲ್ಲ ಯಾತ್ರಾರ್ಥಿಗಳಲ್ಲಿ ಮನವಿ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಹಜ್ ಯಾತ್ರೆಗೆ ತೆರಳುವವರು ಹಾಗೂ ಅವರನ್ನು ಬೀಳ್ಕೊಡಲು ಬರುವಂತಹ ಸಂಬಂಧಿಕರಿಗೆ ಪ್ರತಿ ದಿನ ಹಜ್ ಭವನದ ಬಳಿ ವೈಯಕ್ತಿಕ ಖರ್ಚಿನಲ್ಲಿ ಊಟದ ವ್ಯವಸ್ಥೆ ಮಾಡಿರುವ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಮುಖ್ಯಮಂತ್ರಿ ಇದೇ ವೇಳೆ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ಮುಖ್ಯಮಂತ್ರಿ ಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕಿ ಕನೀಝ್ ಫಾತಿಮಾ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಟ ಅಕ್ಬರ್ ಬಿನ್ ತಬರ್, ರಾಜ್ಯ ಹಜ್ ಸಮಿತಿಯ ಸದಸ್ಯರಾದ ಝುಲ್ಫಿಖಾರ್(ಟಿಪ್ಪು), ಸೈಯದ್ ಮುಜಾಹಿದ್, ಮೌಲಾನಾ ಝೈನುಲ್ ಆಬಿದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.