ಬೆಂಗಳೂರು | ಮದ್ಯ ಸೇವಿಸಿ ವಾಹನ ಚಾಲನೆ ಆರೋಪದಡಿ ಸುಲಿಗೆ: ಇನ್‍ಸ್ಪೆಕ್ಟರ್ ಸಹಿತ ನಾಲ್ವರು ಸಿಬ್ಬಂದಿ ಅಮಾನತು

Update: 2024-02-28 12:39 GMT

ಬೆಂಗಳೂರು : ಮದ್ಯಸೇವಿಸಿ ವಾಹನ ಚಾಲನೆ ಆರೋಪದಡಿ ತಪಾಸಣೆ ಹೆಸರಿನಲ್ಲಿ ಮಹಿಳೆಯೊಬ್ಬರಿಂದ ಹಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್‍ಸ್ಪೆಕ್ಟರ್ ಸಹಿತ ನಾಲ್ವರು ಸಂಚಾರ ಪೊಲೀಸ್ ಸಿಬ್ಬಂದಿಯರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ.

ಜೀವನ್ ಭೀಮಾನಗರ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ವೆಂಕಟಾಚಲಪತಿ, ಹೆಡ್‍ಕಾನ್‍ಸ್ಟೇಬಲ್‍ಗಳಾದ ಗಿರೀಶ್, ಹುಚ್ಚು ಸಾಬ್ ಮತ್ತು ಕಾನ್‍ಸ್ಟೇಬಲ್ ಬಸಪ್ಪ ಎಂಬುವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಫೆ.23ರ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ತಮ್ಮ ಮಗಳನ್ನು ಹಳೆ ಏರ್ ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಬಳಿ ತಡೆದಿದ್ದ ಪೊಲೀಸರು, ತಪಾಸಣೆ ಮಾಡದೇ ಮದ್ಯ ಸೇವಿಸಿ ವಾಹನ ಚಾಲನೆ ಆರೋಪ ಮಾಡಿ ಮೊದಲಿಗೆ 15 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ನಂತರ ಗೂಗಲ್ ಪೇ ನಂಬರ್ ಮೂಲಕ 5 ಸಾವಿರ ರೂ. ಹಾಕಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಣ ಪಡೆದ ಸಿಬ್ಬಂದಿ ಬಾಡಿ ಕ್ಯಾಮ್ ಕಣ್ತಪ್ಪಿಸಿ ಹಣ ಪಡೆದುಕೊಂಡಿದ್ದಾರೆ ಎಂದು ಆಕೆಯ ತಂದೆ ‘ಎಕ್ಸ್’ನಲ್ಲಿ ಆರೋಪಿಸಿ ಹಿರಿಯ ಪೊಲೀಸ್ ಅಧಿಕಾರಿಗೆ ಟ್ಯಾಗ್ ಮಾಡಿದ್ದರು.

ಆರೋಪಕ್ಕೆ ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿದ್ದ ಜೀವನ್ ಭೀಮಾ ನಗರ ಸಂಚಾರಿ ಠಾಣಾ ಪೊಲೀಸರು, ಹಣ ಪಡೆದುಕೊಳ್ಳಲಾಗಿದೆ ಎನ್ನಲಾಗಿರುವ ಗೂಗಲ್ ಪೇ ನಂಬರ್ ಹಂಚಿಕೊಳ್ಳುವಂತೆ ಕೋರಿದ್ದರು. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ತನಿಖೆ ವೇಳೆ ಆರೋಪಿತ ಸಿಬ್ಬಂದಿಯರ ಲೋಪ ಕಂಡುಬಂದ ಹಿನ್ನೆಲೆ ಅಮಾನತುಗೊಳಿಸಿ ಆದೇಶಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News