ಬೆಂಗಳೂರು | ಖಾಸಗಿ ಕಂಪೆನಿಯ ಸಾಫ್ಟ್ ವೇರ್ ಹ್ಯಾಕ್: ಆರೋಪಿ ಬಂಧನ

Update: 2023-07-25 17:20 GMT

ಬೆಂಗಳೂರು, ಜು.25: ಖಾಸಗಿ ಕಂಪೆನಿಯೊಂದು ಅಭಿವೃದ್ಧಿಪಡಿಸಿದ್ದ ಸಾಫ್ಟ್‍ವೇರ್ ಹ್ಯಾಕ್ ಮಾಡಿ, ಪೈರಸಿ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದ ದಕ್ಷಿಣ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ತಮಿಳುನಾಡಿನ ತಿರುಚ್ಚಿ ಮೂಲದ ಇಂಜಿನಿಯರಿಂಗ್ ಪದವೀಧರ ಅರವನೀತ್ ಸಾಮಿ ಬಂಧಿತ ಆರೋಪಿ. ಬೆಂಗಳೂರು ನಗರದ ಬನಶಂಕರಿಯ ಎರಡನೇ ಹಂತದಲ್ಲಿರುವ ಬೆಲ್-ಟಿಪಿಓ ಹೆಸರಿನ ಕಂಪೆನಿ ಸ್ಟಾಕ್ ಮಾರ್ಕೆಟಿಂಗ್ ಸಂಬಂಧಿಸಿದ ಸಾಫ್ಟ್‍ವೇರ್ ಅಭಿವೃದ್ದಿಪಡಿಸಿ ಮಾರಾಟ ಮಾಡುತ್ತಿತ್ತು. ಆದರೆ, ಕಂಪೆನಿ ಮಾರಾಟ ಮಾಡಿದ್ದ ಸಾಫ್ಟ್‍ವೇರ್ ಹ್ಯಾಕ್ ಮಾಡಿ ಅದನ್ನು ಪೈರಸಿ ಮಾಡಿದ್ದ ಆರೋಪಿ ಕೇವಲ ಆರು ಸಾವಿರ ರೂ.ಗಳಂತೆ 80 ಜನರಿಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.

ಈ ಬಗ್ಗೆ ತಮ್ಮ ಗ್ರಾಹಕರೊಬ್ಬರ ಮೂಲಕ ಮಾಹಿತಿ ತಿಳಿದ ಕಂಪೆನಿಯ ಕೋ-ಪ್ರಮೋಟರ್ ಚೇರ್‍ಮನ್ ವಿನೋದ್ ಬೆಲ್ಲಮಕೊಂಡ ದಕ್ಷಿಣ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಿರುಚ್ಚಿಯ ತನ್ನ ಮನೆಯಲ್ಲಿದ್ದುಕೊಂಡೇ ಹ್ಯಾಕ್ ಮಾಡಿ ಸಾಫ್ಟ್‍ವೇರ್ ನಕಲು ಮಾಡಿ ಮಾರಾಟ ಮಾಡಿದ್ದ ಆರೋಪಿ ಅರವನೀತ್ ಸಾಮಿಯನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ ಎಂದು ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News