ಬಿಜೆಪಿ ಶಾಸಕರ ಸಂಬಂಧಿಗಳಿಂದಲೇ ಬಿಬಿಎಂಪಿ ನಕಲಿ ಬಿಲ್: ಎಂ.ಲಕ್ಷ್ಮಣ್ ಆರೋಪ
ಬೆಂಗಳೂರು, ಆ.11: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳದೇ ನಕಲಿ ಬಿಲ್ ಮೂಲಕ ಹಣ ಪಡೆದುಕೊಂಡಿದ್ದು, ಇದರಲ್ಲಿ ಬಹುತೇಕರು ಬಿಜೆಪಿ ಶಾಸಕರ ಸಂಬಂಧಿಕರೇ ಇದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಮಗಾರಿ ಪೂರ್ಣಗೊಳಿಸದೆ ನಕಲಿ ಬಿಲ್ ಮಾಡಿದ ಗುತ್ತಿಗೆದಾರರ ಪೈಕಿ ಬಹುತೇಕರು ಮಲ್ಲೇಶ್ವರಂ ಬಿಜೆಪಿ ಶಾಸಕಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹಾಗೂ ಆರ್.ಅಶೋಕ್ ಅವರ ಬೇನಾಮಿಗಳೇ ಇದ್ದಾರೆ ಎಂದು ಹೇಳಿದರು.
ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಯಲ್ಲಿ ಉಳಿಸಿದ ಬಾಕಿ ಬಿಲ್ ಮೊತ್ತ ಏನು?. ನಮಗೆ ಇರುವ ಮಾಹಿತಿಯಂತೆ ಸುಮಾರು 2,500ಕೋಟಿ ರೂ. ಬಾಕಿ ಬಿಲ್ ಇದೆ. ಬಿಜೆಪಿ ಸರಕಾರದ ಕೊನೆಯ 10 ತಿಂಗಳಲ್ಲಿ ಒಟ್ಟು 118 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. 114 ಕೋಟಿ ರೂ. ಮೊತ್ತದಲ್ಲಿ 64 ಕಾಮಗಾರಿಗಳು ಎಲ್ಲಿ ಆಗಿವೆ ಎಂಬುದೇ ಗೊತ್ತಿಲ್ಲ. ಆದರೆ ಬಿಲ್ ಆಗಿದೆ. ನನಗೆ ಇರುವ ಮಾಹಿತಿ ಪ್ರಕಾರ 2,500 ಕೋಟಿ ಪೈಕಿ ಕೇವಲ 1,000 ಕೋಟಿ ರೂ. ನಷ್ಟು ಮಾತ್ರ ಕಾಮಗಾರಿಯಾಗಿದೆ. ಉಳಿದ 1,500 ಕೋಟಿಯಷ್ಟು ನಕಲಿ ಬಿಲ್ ಆಗಿದೆ. ಈ ನಕಲಿಯಲ್ಲಿ ಬಹುತೇಕರು ಅಶ್ವತ್ಥ್ ನಾರಾಯಣ್ ಹಾಗೂ ಆರ್. ಅಶೋಕ್ ಅವರ ಬೇನಾಮಿಗಳೇ ಇದ್ದಾರೆ ಎಂದು ಆರೋಪಿಸಿದರು.
ಸಚಿವ ಚೆಲುವರಾಯಸ್ವಾಮಿ ಅವರುಮಂಡ್ಯದಲ್ಲಿ ಕೆಲಸಮಾಡುತ್ತಿರುವುದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ರಾಜ್ಯಪಾಲರಿಗೆ ಪತ್ರಬರೆಯುತ್ತೀರಿ. ಈ ಮೂಗರ್ಜಿಯ ರೂವಾರಿ ಯಾರು ಎಂದು ಗೊತ್ತಾಗಿದೆ. ಪತ್ರದಲ್ಲಿ ಒಬ್ಬನೇ ಎಂಟು ಸಹಿ ಹಾಕಿದ್ದಾನೆ. ಎಲ್ಲವೂ ಎರಡು-ಮೂರು ದಿನಗಳಲ್ಲಿ ಹೊರಗೆಬರಲಿದೆ ಎಂದು ಲಕ್ಷ್ಮಣ್ ತಿಳಿಸಿದರು.