ಸುಳ್ಳು ಸುದ್ದಿ ಹರಡುವುದರಲ್ಲಿ ಕುಖ್ಯಾತಿ ಪಡೆದಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ
ಬೆಂಗಳೂರು: ಉಡುಪಿ ಖಾಸಗಿ ಕಾಲೇಜಿನ ವೀಡಿಯೊ ಪ್ರಕರಣವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿ, ಬಂಧನಕ್ಕೊಳಗಾಗಿರುವ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಸಾಮಾಜಿಕ ಜಾಲತಾಣಗಳಲ್ಲಿ ಈ ಥರ ವಿವಾದಾತ್ಮಕ ಪೋಸ್ಟ್ ಗಳನ್ನು ಹಂಚಿರುವುದು ಇದೇ ಮೊದಲಲ್ಲ.
ಬಿಜೆಪಿ ಐಟಿ ಸೆಲ್ ಸದಸ್ಯೆಯೂ ಆಗಿರುವ ತುಮಕೂರು ಮೂಲದ ಶಕುಂತಲಾ, ಈ ಹಿಂದೆಯೂ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿ ಸುಳ್ಳು ಸುದ್ದಿಗಳನ್ನು ಹರಡಿ ಕುಖ್ಯಾತಿ ಪಡೆದ ಮಹಿಳೆ .
ರಾಜಕೀಯ ನಾಯಕರ, ಗಣ್ಯರ, ಧರ್ಮಗಳ ಅವಹೇಳನ ಮಾಡುವುದಲ್ಲದೇ ಕ್ಷುಲ್ಲಕ ವಿಚಾರಗಳಿಗೂ ಕೋಮು ಬಣ್ಣ ಬಳಿಯುವ ಜಾಯಮಾನ ಈಕೆಯದ್ದಾಗಿದೆ.
► ಒಡಿಶಾದಲ್ಲಿ ನಡೆದ ರೈಲು ಅಪಘಾತ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ್ದ ಶಕುಂತಲಾ
250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಜೂನ್ 2 ರಂದು ನಡೆದ ಒಡಿಶಾದ ರೈಲು ಅಪಘಾತ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ್ದ ಆಕೆ, ಹಳಿಯ ಬಳಿ ಮಸೀದಿಯಿತ್ತು. ಘಟನೆಗೆ ಮಸೀದಿ ಪಕ್ಕದಲ್ಲಿ ಇರುವುದು ಕಾರಣ ಎಂದು ಬಿಂಬಿಸುವ ಅರ್ಥದಲ್ಲಿ ಫೋಟೊವೊಂದನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಳು. ವಾಸ್ತವದಲ್ಲಿ ಅದು ಮಸೀದಿಯಾಗಿರಲಿಲ್ಲ, ಇಸ್ಕಾನ್ ದೇವಾಲಯವಾಗಿತ್ತು. ಅಲ್ಲಿ ಮಸೀದಿ ಇರಲೇ ಇಲ್ಲ. ಈ ಬಗ್ಗೆ altnews.in ಸೇರಿ ಹಲವು ಸುದ್ದಿ ಸಂಸ್ಥೆಗಳು ಫ್ಯಾಕ್ಟ್ ಚೆಕ್ ಮಾಡಿ ಶಕುಂತಲಾ ಸುಳ್ಳನ್ನು ಬಯಲು ಮಾಡಿದ್ದವು.
ಅಲ್ಲದೇ, ಈ ಘಟನೆಗೆ 'ಕೋಮು ಆಯಾಮ' ನೀಡಲು ಪ್ರಯತ್ನಿಸಿದ್ದ ಶಕುಂತಲಾ ವಿರುದ್ಧ ಒಡಿಶಾ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ>>> ಒಡಿಶಾ ರೈಲು ದುರಂತಕ್ಕೆ ಕೋಮುಬಣ್ಣ: ತುಮಕೂರಿನ ಬಿಜೆಪಿ ನಾಯಕಿಯ ಪೋಸ್ಟ್ ವೈರಲ್
ಗೃಹ ಸಚಿವ, ಸಿಎಂ ಕುಟುಂಬದ ಅವಹೇಳನ
ಇದೀಗ ಉಡುಪಿಯ ಕಾಲೇಜಿನ ಪ್ರಕರಣವನ್ನು ಉಲ್ಲೇಖಿಸಿ ಸಿಎಂ ಕುಟುಂಬದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿರುವ ಆಕೆ, 'ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ ನವರ ಪ್ರಕಾರ ಮಕ್ಕಳಾಟವಂತೆ.. ಸಿದ್ದರಾಮಯ್ಯನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೇ ತರ ಮಾಡಿದ್ರೆ ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ?' ಎಂದು ಟ್ವೀಟ್ ಮಾಡಿದ್ದಾಳೆ.
ಇನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಕುಟುಂಬದ ಬಗ್ಗೆ ಟ್ವೀಟ್ ಮಾಡಿ, ''ನಿಮ್ಮ ಮಗ sorry ನಿಮ್ಮ ಮಗಳನ್ನು ಕೇಳಿ ಇದರ ಬಗ್ಗೆ ಅಭಿಪ್ರಾಯ ಏನು ಅನ್ನೋದು ಹೇಳೋಕೆ ಆಗುತ್ತಾ?'' ಎಂದು ಪರಮೇಶ್ವರ್ ಅವರನ್ನು ಟ್ಯಾಗ್ ಮಾಡಿದ್ದಾಳೆ.