ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಆ.21ರಂದು ಬಿಜೆಪಿಯಿಂದ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಗೆ ಕರೆ

Update: 2023-08-19 14:55 GMT

ಮಂಡ್ಯ, ಆ.19: ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವ ರಾಜ್ಯ ಸರಕಾರದ ವಿರುದ್ಧ ಆ.21ರಂದು ಬೆಳಗ್ಗೆ 11:00 ಗಂಟೆಗೆ ಜಿಲ್ಲೆಯ ಯಲಿಯೂರು ಸರ್ಕಲ್‍ನಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲು ಬಿಜೆಪಿ ತೀರ್ಮಾನಿಸಿದೆ.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಐದು ಜಿಲ್ಲೆಗಳ ಬಿಜೆಪಿ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಾಗಿದ್ದು, ಕಾವೇರಿ ಕೊಳ್ಳದ ಐದು ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣಗೌಡ, ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಡುಗಡೆ ಸ್ಥಗಿತಗೊಳಿಸಲು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರತಿಭಟನೆ ನೇತೃತ್ವಕ್ಕೆ ಕರೆಯಲಾಗುವುದು. ಮೈಸೂರು, ಮಂಡ್ಯ, ಇತರೆ ಸಂಸದರು, ಜಿಲ್ಲೆಯ ಜನಪರ, ರೈತ, ಕನ್ನಡಪರ ಮತ್ತು ಆಟೋ ಟ್ಯಾಕ್ಸಿ ಮಾಲಕರು, ಚಾಲಕರನ್ನು ಹೋರಾಟಕ್ಕೆ ಆಹ್ವಾನಿಸಲಾಗುವುದು ಎಂದು ಅವರು ತಿಳಿಸಿದರು.

ತಮಿಳುನಾಡು ಜಲಾಶಯಗಳಲ್ಲಿ ಸಾಕಷ್ಟು ನೀರು ಸಂಗ್ರಹಣೆ ಇದೆ. 1.80 ಲಕ್ಷ ಹೆಕ್ಟೇರ್‍ನಲ್ಲಿ ಕುರುವೈ ಬೆಳೆ ಬೆಳೆಯಬೇಕೆಂದ ತೀರ್ಪಿದ್ದರೂ 3 ಲಕ್ಷ ಹೆಕ್ಟೇರ್‍ನಲ್ಲಿ ಬೆಳೆಯಲಾಗಿದೆ. ಆದರೂ, ನಮ್ಮ ರಾಜ್ಯದ ಜಲಾಶಯಗಳಲ್ಲಿ ನೀರಿನ ಕೊರತೆ ಇದ್ದರೂ ಸರಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ ಎಂದು ಅವರು ಕಿಡಿಕಾರಿದರು.

ಪ್ರತಿಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯರಾದ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ಒಲೈಸುವುದಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೀರು ಹರಿಸಲು ತೀರ್ಮಾನ ಕೈಗೊಂಡಿದ್ದಾರೆ ಎಂದು ಅವರು ಆರೋಪಿಸಿದರು.

ರೈತರ ಪರ ನಿಲ್ಲಬೇಕು: ಸುಮಲತಾ

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ತಮಿಳುನಾಡಿಗೆ ನೀರು ಬಿಡುತ್ತಿರುವ ವಿರುದ್ಧ ರಾಜಕೀಯ ಬಿಟ್ಟು ಪ್ರತಿಯೊಬ್ಬರೂ ರೈತರ ಪರವಾಗಿ ನಿಲ್ಲಬೇಕು. ಹಾಗಾಗಿ ನಾನು ಹೋರಾಟದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಸ್ಷಷ್ಟಪಡಿಸಿದರು.

ಕಾವೇರಿ ನದಿ ನೀರಿನ ಹಂಚಿಕೆ ವಿಚಾರದ ಸಂಬಂಧ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೇಂದ್ರ ಸರಕಾರದ ಜತೆ ಹಲವು ಬಾರಿ ಚರ್ಚಿಸಿದ್ದೇನೆ. ಆದರೆ, ಸಂಸದೆಯಾಗಿ ನಾನು ನ್ಯಾಯಾಲಯದಲ್ಲಿ ಮಾತನಾಡಲು ಆಗುವುದಿಲ್ಲ ಎಂದು ಅವರು ಹೇಳಿದರು.

ಜಲಾಶಯದ ಕೀ ಕೇಂದ್ರ ಸರಕಾರದ ಕೈಯಲ್ಲಿರುವುದರಿಂದ ಸಮಸ್ಯೆಯನ್ನು ಕೇಂದ್ರ ಸರಕಾರ ಇತ್ಯರ್ಥಪಡಿಸಬೇಕು ಎನ್ನುವುದಾದರೆ, ಕಾಂಗ್ರೆಸ್ ಸರಕಾರದಲ್ಲಿ ಕೇಂದ್ರ ಸಚಿವರಾಗಿದ್ದ ಅಂಬರೀಶ್ ಅವರು ರಾಜೀನಾಮೆ ನೀಡಬೇಕಾಗುತ್ತಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಅವರು ಪ್ರತಿಕ್ರಿಯಿಸಿದರು.

ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ಶಾಸಕರಾದ ಕೆ.ಎಲ್.ನಾಗೇಂದ್ರ, ನಿರಂಜನ್ ಕುಮಾರ್, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸಿದ್ದರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಹಾಗೂ ರಾಜೇಂದ್ರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News