ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದ ಬಿಜೆಪಿ: ನಡ್ಡಾ, ಕಟೀಲು, ಮುಖ್ಯ ಕಾರ್ಯದರ್ಶಿಗೆ ಲೀಗಲ್‌ ನೋಟಿಸ್

Update: 2023-09-09 18:30 GMT

ಬೆಂಗಳೂರು, ಸೆ.9: ರಾಜ್ಯ ವಿಧಾನಸಭಾ ಚುನಾವಣೆ ಬಳಿಕ ವಿರೋಧ ಪಕ್ಷದ ಸ್ಥಾನ ಗಳಿಸಿರುವ ಬಿಜೆಪಿ ಈವರೆಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವುದನ್ನು ಆಕ್ಷೇಪಿಸಿ ವಕೀಲ ಎನ್.ಪಿ.ಅಮೃತೇಶ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಶನಿವಾರ ಲೀಗಲ್ ನೋಟಿಸ್ ನೀಡಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ಸಭೆ ನಡೆಸಲು ನಿರ್ದೇಶಿಸಲು ವಿಫಲವಾದರೆ ಸಕ್ಷಮ ಪ್ರಾಧಿಕಾರ, ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದು ನೋಟಿಸ್​​ನಲ್ಲಿ ತಿಳಿಸಿದ್ದಾರೆ. ಒಂದೊಮ್ಮೆ ಇದರಲ್ಲಿ ವಿಫಲವಾದರೆ ಈ ಸಂಬಂಧ ಸಕ್ಷಮ ಪ್ರಾಧಿಕಾರ, ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯವಾಗಲಿದೆ ಎಂದು ಲೀಗಲ್ ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.

ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಮನವಿ ಸಲ್ಲಿಸಬೇಕಾದರೆ ಅವರು ಅಂತಿಮವಾಗಿ ವಿಪಕ್ಷ ನಾಯಕನ ಮೂಲಕ ಹೋಗಬೇಕಾಗುತ್ತದೆ. ಆದರೆ, ಬಿಜೆಪಿಯು ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ. ವಿಧಾನಸಭೆಯ ಪ್ರತಿಪಕ್ಷದ ನಾಯಕನಿಗೆ ಹಲವು ಅಧಿಕಾರ ಮತ್ತು ಕರ್ತವ್ಯಗಳಿವೆ. ಲೋಕಾಯುಕ್ತ, ಉಪಲೋಕಾಯುಕ್ತ, ಕೆಪಿಎಸ್‌ಸಿ ಸದಸ್ಯರು, ಆರ್‌ಟಿಐ ಆಯುಕ್ತರು, ಗ್ರಾಹಕರ ಒಕ್ಕೂಟ, ಆಡಳಿತಾತ್ಮಕ ನ್ಯಾಯ ಮಂಡಳಿ ಇತ್ಯಾದಿ ಸಾಂವಿಧಾನಿಕ ನೇಮಕಾತಿಗಳಲ್ಲಿ ವಿಪಕ್ಷ ನಾಯಕ ಭಾಗವಹಿಸಬೇಕು ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಚುನಾಯಿತ ಸರಕಾರ ಸಕ್ರಿಯವಾಗಿ ಕೆಲಸ ಮಾಡದಿದ್ದಾಗ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ಸರಕಾರದಿಂದ ದುರ್ಬಳಕೆ, ದುರಾಚಾರ, ಅಧಿಕಾರ ದುರ್ಬಳಕೆ ಇತ್ಯಾದಿ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಧ್ವನಿ ಎತ್ತುವ ಅಧಿಕಾರ ಹೊಂದಿದ್ದಾರೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಇರುವ ಮೂಲಕ ಬಿಜೆಪಿಯು ಜನರ ಧ್ವನಿಯಾಗುವಲ್ಲಿ ವಿಫಲವಾಗಿದೆ ಎಂದು ನೋಟಿಸ್‌ನಲ್ಲಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News