ಬಿಜೆಪಿಯಲ್ಲಿ ದಲಿತರು ರಾಜ್ಯಾಧ್ಯಕ್ಷ ಆಗಬಾರದೇ?: ಸಂಸದ ರಮೇಶ್ ಜಿಗಜಿಣಗಿ
ಬೆಳಗಾವಿ, ಜೂ. 25: ‘ನಾನೂ ಬಿಜೆಪಿಯ ಹಿರಿಯ ನಾಯಕ. ಅವಕಾಶ ಕೊಟ್ಟರೆ ನಾನೂ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತೇನೆ. ಬಿಜೆಪಿಯಲ್ಲಿ ದಲಿತರು ರಾಜ್ಯಾಧ್ಯಕ್ಷ ಆಗಬಾರದೇ?’ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪಕ್ಷದ ರಾಜ್ಯಾಧ್ಯಕ್ಷ ಯಾರು ಆಗಬೇಕು ಎಂಬುದನ್ನು ಬಹಿರಂಗವಾಗಿ ಚರ್ಚೆ ಮಾಡುವುದು ಸರಿಯಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ನಾಯಕರೇ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ’ ಎಂದು ನುಡಿದರು.
‘ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಎಲ್ಲಿ ಕೇಳಬೇಕು ಎಂಬುದು ನನಗೆ ಗೊತ್ತಿದೆ. ನನಗೂ ರಾಜ್ಯಾಧ್ಯಕ್ಷ ಸ್ಥಾನ ನೀಡುವಂತೆ ಕೋರುತ್ತೇನೆ. ಬಡವರ್ಗದ ಜನರನ್ನು ಕೇವಲ ಕಾಂಗ್ರೆಸ್ ಏನು ಗುತ್ತಿಗೆ ಪಡೆದಿದೆಯೇ?’ ಎಂದು ಪ್ರಶ್ನಿಸಿದ ಅವರು, ‘ಅನ್ನಭಾಗ್ಯ ಯೋಜನೆಗೆ ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್‍ನವರು ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುತ್ತಿದೆ’ ಎಂದು ದೂರಿದರು.
‘ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸುವುದು ಅನುಮಾನ. ಹೀಗೆ ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಹಳ ದಿನ ಇರುವುದಿಲ್ಲ. ಯಾವುದೇ ಅಭಿವೃದ್ಧಿ ಯೋಜನೆ ಬಗ್ಗೆ ಮಾತನಾಡಲ್ಲ. ಬರೀ ಮೋದಿ ಅವರನ್ನೇ ಟೀಕಿಸುತ್ತಾರೆ. 9 ವರ್ಷದ ಅವಧಿಯಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ’ ಎಂದು ರಮೇಶ್ ಜಿಗಜಿಣಗಿ ತಿಳಿಸಿದರು.