ಚುನಾವಣಾ ಬಾಂಡ್ ಖರೀದಿ ಹಗರಣವನ್ನು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು: ಪ್ರಶಾಂತ್ ಭೂಷಣ್ ಆಗ್ರಹ

Update: 2024-04-20 16:15 GMT

ಬೆಂಗಳೂರು: ವಿಶ್ವದ ಅತೀ ದೊಡ್ಡ ಹಗರಣ ಎಂದು ನಂಬಲಾದ ‘ಚುನಾವಣಾ ಬಾಂಡ್ ಖರೀದಿ ಹಗರಣ’ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಸತ್ಯಾಸತ್ಯತೆ ತಿಳಿಯಲು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‍ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆಗ್ರಹಿಸಿದ್ದಾರೆ.

ಶನಿವಾರ ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ನಡೆದ ಪತ್ರಿಕಾಗೋಷ್ಠಿ ಬಳಿಕ ಇಲ್ಲಿನ ಕೆ.ಆರ್.ವೃತ್ತದಲ್ಲಿರುವ ಅಲುಮಿನಿ ಸಭಾಂಗಣದಲ್ಲಿ ರಾಜ್ಯ ಎಸ್‍ಸಿ-ಎಸ್‍ಟಿ ಗುತ್ತಿಗೆದಾರ ಸಂಘವು ಆಯೋಜಿಸಿದ್ದ ‘ಚುನಾವಣಾ ಬಾಂಡ್ ಮತ್ತು ಮುಂದಿನ ಕ್ರಮಗಳು’ ಎಂಬ ರಾಷ್ಟ್ರೀಯ ವಿಚಾರಗೋಷ್ಠಿ ಹಾಗೂ ಗಾಂಧಿ ಭವನ ಸಭಾಂಗಣದಲ್ಲಿ ಜಾಗೃತ ಕರ್ನಾಟಕ ಏರ್ಪಡಿಸಿದ್ದ ‘ಎಲೆಕ್ಟೋರಲ್ ಬಾಂಡ್ ಇದೇಕೆ ಅತೀ ದೊಡ್ಡ ಭ್ರಷ್ಟಾಚಾರ?’ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕೆಲ ಕಂಪೆನಿಗಳು ಚುನಾವಣಾ ಬಾಂಡ್‍ಗಳನ್ನು ಖರೀದಿಸಿ, ರಾಜಕೀಯ ಪಕ್ಷಗಳಿಗೆ ಪಕ್ಷಗಳಿಗೆ ದೇಣಿಗೆ ನೀಡುವ ಮೂಲಕ ಸಾಕಷ್ಟು ಅನುಕೂಲ ಪಡೆದಿವೆ. ವಿಚಾರಣೆ ಎದುರಿಸುತ್ತಿದ್ದ ಅನೇಕ ಕಂಪೆನಿಗಳು ಮುಕ್ತವಾಗಿವೆ. ಇನ್ನೊಂದೆಡೆ ಅನೇಕ ಕಂಪೆನಿಗಳು ಸಹಾಯಾರ್ಥವಾಗಿ ಸರಕಾರದಿಂದ ದೊಡ್ಡ ದೊಡ್ಡ ಕಾಮಗಾರಿಗಳ ಟೆಂಡರ್ ಪಡೆದುಕೊಂಡಿವೆ. ಹೀಗೆ, ಕಂಪೆನಿಗಳು-ರಾಜಕೀಯದ ನಡುವೆ ಅಪವಿತ್ರ ಮೈತ್ರಿ ಏರ್ಪಟ್ಟಿದೆ. ಈ ಎಲ್ಲದರ ಬಗ್ಗೆ ತನಿಖೆ ನಡೆಸಿ, ಚುನಾವಣಾ ಬಾಂಡ್‍ನಿಂದ ಅಕ್ರಮವಾಗಿ ಪಡೆದ ಹಣ ಮರಳಿ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯವಾಗಿ ಜಾರಿ ನಿರ್ದೇಶನಾಲಯ(ಈಡಿ), ಆದಾಯ ತೆರಿಗೆ ಇಲಾಖೆ, ಸಿಬಿಐ ಸೇರಿದಂತೆ ಇತರೆ ಸಂಸ್ಥೆಗಳು ಕಂಪೆನಿಗಳ ಮೇಲೆ ದಾಳಿ ನಡೆಸಿ, ವಿಚಾರಣೆ ಒಳಪಡಿಸುತ್ತವೆ. ಈ ರೀತಿ ವಿಚಾರಣೆಗೆ ಒಳಪಟ್ಟ ಕಂಪೆನಿಗಳು ಚುನಾವಣಾ ಬಾಂಡ್‍ಗಳನ್ನು ಖರೀದಿಸಿ, ಮುಕ್ತವಾಗಿವೆ. ಅದರಲ್ಲೂ ಮೇಘಾ ಇಂಜಿನಿಯರಿಂಗ್ 140 ಕೋಟಿ ರೂ. ಚುನಾವಣಾ ಬಾಂಡ್ ಖರೀದಿಸಿದ್ದು, ಮಹಾರಾಷ್ಟ್ರದ ಬಿಜೆಪಿ ಸರಕಾರದಿಂದ 14 ಸಾವಿರ ಕೋಟಿ ರೂ. ಮೊತ್ತದ ಟನಲ್ ಕಾಮಗಾರಿ ಗುತ್ತಿಗೆಯನ್ನು ಪಡೆದುಕೊಂಡಿದೆ. ಇದು ಚುನಾವಣಾ ಬಾಂಡ್ ಖರೀದಿಯಲ್ಲಿ ನಡೆದಿರುವ ಕಿಕ್‍ಬ್ಯಾಕ್ ಅವ್ಯಹಾರದ ಅಂದಾಜು ನೀಡುತ್ತದೆ ಎಂದು ಪ್ರಶಾಂತ್ ಭೂಷಣ್ ಟೀಕಿಸಿದರು.

ಹಾಗೇ, ಔಷಧೀಯ ಕಂಪೆನಿಗಳೂ ಚುನಾವಣಾ ಬಾಂಡ್‍ಗಳನ್ನು ಖರೀದಿ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡುವುದಕ್ಕೆ ಔಷಧೀಯ ಕಂಪೆನಿಗಳಿಗೆ ಅವಕಾಶ ನೀಡಲಾಗಿದೆ ಎನ್ನುವ ದೂರುಗಳಿದ್ದು, ಈ ಕಳಪೆ ಗುಣ್ಣಮಟ್ಟದ ಔಷಧಿಗಳನ್ನು ಬಳಸದಂತೆ ತಡೆಯಬೇಕಿತ್ತು. ಆದರೆ ಬಾಂಡ್ ಖರೀದಿ ಮಾಡುವ ಮೂಲಕ ಲಕ್ಷಾಂತರ ಜನರನ್ನು ಕೊಲ್ಲುವುದಕ್ಕೆ ಅನುಮತಿ ನೀಡಿದಂತೆ ಆಗಿದೆಯೇ ಎಂದು ಪ್ರಶಾಂತ್ ಭೂಷಣ್ ಪ್ರಶ್ನಿಸಿದರು.

ಚುನಾವಣಾ ಬಾಂಡ್‍ಗಳನ್ನು 1 ಕೋಟಿ ಮೊತ್ತ ರೂ.ಯಿಂದ ಖರೀದಿ ಮಾಡಬಹುದಾಗಿದೆ. ಯಾವುದಾದರೂ ಎಸ್‍ಬಿಐ ಬ್ಯಾಂಕ್‍ನಿಂದ ಖರೀದಿ ಮಾಡಿ, ಅದನ್ನು 15 ದಿನಗಳ ಒಳಗಾಗಿ ಪಕ್ಷಗಳಿಗೆ ನೀಡಬಹುದು. ಆ ಪಕ್ಷಗಳು ಚುನಾವಣಾ ಬಾಂಡ್ ಅನ್ನು ಹಣವಾಗಿ ಪರಿವರ್ತಿಸಿಕೊಳ್ಳಬಹುದು. ಚುನಾವಣಾ ಬಾಂಡ್‍ಗಳಿಗೆ ಕ್ರಮ ಸಂಖ್ಯೆ ಇರಲಿಲ್ಲ. ಅದರ ಬದಲಾಗಿ, ಅಕ್ಷರಗಳನ್ನು ನಿಗದಿ ಮಾಡಲಾಗಿತ್ತು. ಎಸ್‍ಬಿಐ ಈ ಬಾಂಡ್‍ಗಳ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಆದರೆ, ಬ್ಯಾಂಕ್ ಆಡಳಿತರೂಢ ಬಿಜೆಪಿಯ ಆದೇಶದಂತೆ ಕೆಲಸ ಮಾಡಿದೆ ಎಂದು ಅವರು ಆಪಾದಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಸ್‍ಸಿ-ಎಸ್‍ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎನ್.ಮಹಾದೇವ ಸ್ವಾಮಿ, ಅಂಜಲಿ ಭಾರದ್ವಾಜ್, ತ್ರಿಲೋಚನ್ ಶಾಸ್ತ್ರಿ, ಹರೀಶ್ ನರಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಬಳಿ ಅಧಿಕ ಹಣವಿದೆ: ‘ನಿಯಮಗಳ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿಯೂ 75 ಲಕ್ಷ ರೂಪಾಯಿ ವೆಚ್ಚ ಮಾಡುವುದಕ್ಕೆ ಅವಕಾಶ ಇದೆ. ಬಿಜೆಪಿ ದೇಶದಲ್ಲಿ 500 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ, ಅಂದಾಜು 400 ಕೋಟಿ ರೂಪಾಯಿ ವೆಚ್ಚವಾಗುತ್ತದೆ. ಆದರೆ, ಆರು ವರ್ಷಗಳಲ್ಲಿ 8 ಸಾವಿರ ಕೋಟಿ ರೂ.ಗೂ ಹೆಚ್ಚು ಚುನಾವಣಾ ಬಾಂಡ್ ಸಿಕ್ಕಿದೆ. ಅಂದರೆ ಒಬ್ಬ ಅಭ್ಯರ್ಥಿ ಲೋಕಸಭೆ ಚುನಾವಣೆಯಲ್ಲಿ ವೆಚ್ಚ ಮಾಡಬಹುದಾದ ಪ್ರಮಾಣಕ್ಕಿಂತ 20ಪಟ್ಟು ಮೊತ್ತದ ಹಣವನ್ನು ಬಿಜೆಪಿ ಖರ್ಚು ಮಾಡಲು ಸಾಧ್ಯವಿದೆ’ ಎಂದು ಪ್ರಶಾಂತ್ ಭೂಷಣ್ ದೂರಿದ್ದಾರೆ.

2018ರ ಬಳಿಕ ಬಾಂಡ್ ಖರೀದಿಸಿದವರಲ್ಲಿ ಹೆಚ್ಚಿನವರು ಐಟಿ-ಈಡಿ ದಾಳಿಗಳಿಂದ ತಪ್ಪಿಸಿಕೊಳ್ಳಲು ಮತ್ತು ಸರಕಾರದ ವಿವಿಧ ಯೋಜನೆಗಳಿಂದ ಲಾಭ ಪಡೆದವರಾಗಿದ್ದಾರೆ ಎನ್ನುವ ವಿಚಾರ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಹೊಸದಾಗಿ ಸ್ವತಂತ್ರ ತನಿಖೆ ನಡೆಸಿ, ಯಾವ ಕಾರಣ ಹಾಗೂ ಯಾರಿಗೆ ಎಷ್ಟು ಹಣ ಹೋಗಿದೆ? ಇದು ಲಂಚ ನೀಡುವ ಪರ್ಯಾಯ ಮಾರ್ಗವೇ? ಎಂಬುದನ್ನು ಇನ್ನಷ್ಟು ತನಿಖೆ ನಡೆಸಬೇಕು ಎಂದು ಪ್ರಶಾಂತ್ ಭೂಷಣ್ ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News