ಎಪ್ರಿಲ್‍ನಿಂದ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿ: ಸಚಿವ ದಿನೇಶ್ ಗುಂಡೂರಾವ್

Update: 2025-03-23 20:48 IST
ಎಪ್ರಿಲ್‍ನಿಂದ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿ: ಸಚಿವ ದಿನೇಶ್ ಗುಂಡೂರಾವ್
  • whatsapp icon

ಬೆಳಗಾವಿ: ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ರವಿವಾರ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಸೇವೆಗಳನ್ನು ಬಡ ವರ್ಗದ ಜನರ ಬಳಿಗೆ ತರುವಲ್ಲಿ ಉಚಿತ ಆರೋಗ್ಯ ತಪಾಸಣಾ ಮೇಳಗಳು ಯಶಸ್ವಿಯಾಗುತ್ತಿವೆ. ದೊಡ್ಡ ಮಟ್ಟದ ಆರೋಗ್ಯ ಮೇಳಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಪಡಿಸಲು ತಾಲೂಕುಗಳಲ್ಲಿ ನಡೆಸಲಾಗುತ್ತಿದೆ ಎಂದರು.

ಈಗಾಗಲೇ ಗೃಹ ಆರೋಗ್ಯ ಯೋಜನೆಯನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಎಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ. ನಮ್ಮ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು 46 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯ ರಾಮದುರ್ಗಾ ಹಾಗೂ ಕಿತ್ತೂರು ತಾಲೂಕು ಅಸ್ಪತ್ರೆಗಳಿಗೂ ಸುಸಜ್ಜಿತವಾದ ನೂತನ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೇ ಗೋಕಾಕ್‍ನಲ್ಲಿ ಪ್ರತ್ಯೇಕ ಜಿಲ್ಲಾಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ರಾಜ್ಯ ಸರಕಾರ ಗ್ಯಾರಂಟಿಗಳನ್ನು ನೀಡುವುದರ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಈ ಬಾರಿಯ ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಅಥಣಿಗೆ 50 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ ನೀಡಿದ್ದೇವೆ. ಆರೋಗ್ಯ ಸೇವೆಗಳಲ್ಲಿ ಸಾಕಷ್ಟು ಸುಧಾರಣೆ ತರುವತ್ತ ಸತತವಾಗಿ ಪ್ರಯತ್ನಿಸಲಾಗುತ್ತಿದೆ. ಬಡ ಜನರ ಪರ ಕಾಂಗ್ರೆಸ್ ಸರಕಾರ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

 

 

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News