ʼಹಿಂದಿ ದಿವಸ್ʼ ಬೇಡ, ʼಭಾಷಾ ದಿವಸ್ʼ ಬೇಕು: ಯೋಗೇಂದ್ರ ಯಾದವ್

ಬೆಂಗಳೂರು: ಭಾರತೀಯ ಎಲ್ಲ ಭಾಷೆಗಳಿಗೂ ಮಹತ್ವವಿದ್ದು, ಎಲ್ಲವೂ ಭಾರತೀಯ ಭಾಷೆಗಳು. ಹಾಗಾಗಿ, ನಮಗೆ ಹಿಂದಿ ದಿವಸ್ ಬೇಡ, ಭಾಷಾ ದಿವಸ್ ಬೇಕು ಎಂದು ಸ್ವರಾಜ್ ಇಂಡಿಯಾ ಪಕ್ಷದ ಸಹ ಸಂಸ್ಥಾಪಕ ಹಾಗೂ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಹೇಳಿದ್ದಾರೆ.
ರವಿವಾರ ನಗರದ ಮಿಡಾಸ್ ಸ್ಕೂಲ್ ಆಫ್ ಎಂಟರ್ ಪ್ರೆನರಶಿಪ್‍ನ ಸಭಾಂಗಣದಲ್ಲಿ ಸಮಾಜಮುಖಿ, ಅಂಕುರ ಪ್ರಕಾಶನ ಮತ್ತು ಸ್ವ್ಯಾನ್ ಪ್ರಿಂಟರ್ ಆಶ್ರಯದಲ್ಲಿ ಚಂದ್ರಕಾಂತ ವಡ್ಡು ಅವರ ಸಂಪಾದಿತ ಚನ್ನಬಸವಣ್ಣನ ಗುಣವಿಶೇಷ ಕೃತಿ 'ಚುಂಬಕ ಗಾಳಿ' ಲೋಕಾರ್ಪಣೆ ಮತ್ತು ‘ಲೋಹಿಯಾ ಸಮಾಜವಾದ ಮತ್ತು ಇಂದಿನ ಸರಕಾರಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂದೂ ಸಹ ಹಿಂದಿ ರಾಜ ಭಾಷೆ ಆಗಿಲ್ಲ. ಆದರೆ, ಭಾರತೀಯ ಎಲ್ಲ ಭಾಷೆಗಳಿಗೂ ತನ್ನದೇ ಆದ ಇತಿಹಾಸ, ಮಹತ್ವವಿದೆ. ಹೀಗಾಗಿ ಎಲ್ಲವೂ ಭಾರತೀಯ ಭಾಷೆಗಳಾಗಿದ್ದು, ಎಲ್ಲವನ್ನು ಸಮಾನ ದೃಷ್ಟಿಕೋನದಿಂದ ನೋಡಬೇಕಾಗಿದೆ. ಜತೆಗೆ, ನಮಗೆ ಹಿಂದಿ ದಿವಸ್ ಬೇಡ, ಭಾಷಾ ದಿವಸ್ ಬೇಕಾಗಿದ್ದು, ಈ ನಿಟ್ಟಿನ ಕೂಗು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದು ನುಡಿದರು.
ಸಮಾಜವಾದಿ ತತ್ವಚಿಂತಕ ಮತ್ತು ನಾಯಕ ಡಾ.ರಾಮನೋಹರ ಲೋಹಿಯಾ ಅವರನ್ನು ಎಷ್ಟು ಅರ್ಥ ಮಾಡಿಕೊಂಡಿದ್ದೇವೋ, ಅಷ್ಟೇ ತಪ್ಪು ಅರ್ಥಮಾಡಿಕೊಂಡಿದ್ದೇವೆ. ಇಂದು ಲೋಹಿಯಾ ನಾಲ್ಕು ವಿಚಾರಗಳಿಂದ ಹೆಚ್ಚು ಜನಪ್ರಿಯರು. ಅವು ಕಾಂಗ್ರೆಸ್ ವಿರೋಧಿ, ಇಂಗ್ಲಿಷ್ ವಿರೋಧಿ, ಮಂಡಲ್ ವರದಿ ಮತ್ತು ಮಾರ್ಕ್ಸ್ ವಾದದ ವಿರೋಧಿ ಎಂಬ ಕಾರಣಕ್ಕೆ. ಆದರೆ ಲೋಹಿಯಾ ವಿರೋಧಿಸಿದ್ದು ಕಾಂಗ್ರೆಸ್ ಅನ್ನು ಅಲ್ಲ, ಅಧಿಕಾರದ ಪಟ್ಟಭದ್ರ ಹಿತಾಸಕ್ತಿಯನ್ನ. ಇದು ಅವರ ನಿಲುವೇ ಹೊರತು, ಕಾಂಗ್ರೆಸ್ ವಿರೋಧಿ ನೀತಿ ಅಲ್ಲ ಎಂದು ಅವರು ವಿಶ್ಲೇಷಿಸಿದರು.
ಮಾಕ್ರ್ಸ್ ವಾದವನ್ನು ಲೋಹಿಯಾ ವಿರೋಧಿಸಿದ್ದರು ಎನ್ನುವ ಮಾತಿದೆ. ವಾಸ್ತವವಾಗಿ ಲೋಹಿಯಾ ಮಾಕ್ರ್ಸ್ ವಾದವನ್ನು ವಿರೋಧಿಸಲಿಲ್ಲ ವಿಶ್ಲೇಷಣೆ ಮಾಡಿದರು. ವಿಶ್ಲೇಷಿಸಿ ಪ್ರಶ್ನೆ ಮಾಡಿದರು. ಆದರೆ ಅವರ ಮಾಕ್ರ್ಸ್ ವಾದದ ವಿಶ್ಲೇಷಣೆಯನ್ನೇ ಲೋಹಿಯಾ ಅವರ ವಿರೋಧ ಎಂದು ತಿಳಿಯಲಾಗಿದೆ. ಇದು ಅವರು ವಿರೋಧಿಸಿದ್ದಲ್ಲ ಪ್ರಶ್ನಿಸಿದ್ದ ಎಂಬುದನ್ನು ಅರಿತುಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.
ಅದೇ ರೀತಿ, ಲೋಹಿಯಾ ಅವರು ಇಂಗ್ಲಿಷ್ ಅನ್ನು ಬರೆಯಲು ಮತ್ತು ಮಾತನಾಡಲು ಚೆನ್ನಾಗಿ ಬಲ್ಲರು. ಆದರೆ ಅವರು ಇಂಗ್ಲಿಷನ್ನು ವಿರೋಧಿಸಿದ್ದು, ಅದೊಂದು ಊಳಿಗಮಾನ್ಯ ಪದ್ಧತಿಯ ರೀತಿಯಲ್ಲಿ ಆದ ಕಾರಣಕ್ಕೆ. ಇಂಗ್ಲೀಷ್ ಬಲ್ಲವರು ಮೇಲ್ವರ್ಗ ಎಂಬ ನಿಲುವನ್ನು ಲೋಹಿಯಾ ವಿರೋಧಿಸಿದ್ದರು ಎಂದು ಯೋಗೇಂದ್ರ ಯಾದವ್ ಹೇಳಿದರು.
ರಾಜ್ಯ ಸರಕಾರದ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಉಪಾಧ್ಯಕ್ಷ ಬಿಆರ್ ಪಾಟೀಲ್ ಮಾತನಾಡಿ, ಕಾಂಗ್ರೆಸ್ ನಿಂದ ತುರ್ತು ಪರಿಸ್ಥಿತಿಗೆ ಸಂದರ್ಭದಲ್ಲಿ ಜೈಲಿಗೆ ಹೋದವ ನಾನು, ಈಗ ಅದೇ ಪಕ್ಷದಲ್ಲಿದ್ದೇನೆ ಇದು ವಿಪರ್ಯಾಸ. ನಾವು ಕಟ್ಟಿದ ಮನೆಗಳು ಬಿದ್ದಿದ್ದು ಇದಕ್ಕೆ ಕಾರಣ ಎಂದು ನುಡಿದರು.
ಕೃತಿಯ ಬಗ್ಗೆ ಮಾತನಾಡಿದ ಚಿಂತಕ ಸುಭಾಷ್ ರಾಜಮಾನೆ ಮಾತನಾಡಿದರು. ಸಮಾಜಮುಖಿ ಜಯರಾಮ್ ರಾಯಪುರ ಅಧ್ಯಕ್ಷೀಯ ನುಡಿಗಳ್ನಾಡಿದರು. ಲೇಖಕ ಚೆನ್ನಬಸವಣ್ಣ, ಚಂದ್ರಕಾಂತ ವಡ್ಡು ಸೇರಿದಂತೆ ಪ್ರಮುಖರಿದ್ದರು.
