ಬಿಜೆಪಿಯವರು ಮಣಿಪುರವನ್ನೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ; ಬೆಂಕಿ ಹಚ್ಚುವುದೇ ಅವರ ಕೆಲಸ: ಸಿಎಂ ಸಿದ್ದರಾಮಯ್ಯ

Update: 2023-07-21 10:23 GMT

ಬೆಂಗಳೂರು, ಜು. 21: ''ಬಸವಣ್ಣನವರ ದಾಸೋಹ ಮತ್ತು ಕಾಯಕ ಸಂಸ್ಕೃತಿಯ ಆಶಯ ನಮ್ಮ ಆಯವ್ಯಯದಲ್ಲಿದೆ. ಬಿಜೆಪಿಯವರು ಬಸವ ವಿರೋಧಿಗಳು. ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ. ಅವರು ಮಣಿಪುರವನ್ನೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ. ಬೆಂಕಿ ಹಚ್ಚುತಾರೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಶುಕ್ರವಾರ ವಿಧಾನ ಪರಿಷತ್ ನಲ್ಲಿ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, 'ಮಹಾತ್ಮಗಾಂಧಿ ಜೀವನ ಸಂದೇಶವೇ ಸತ್ಯ-ಅಹಿಂಸೆ ಆಗಿತ್ತು. ಸದಾ ಸುಳ್ಳು ಹೇಳುವ ಬಿಜೆಪಿಯವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕುಳಿತಿದ್ದಾರೆ' ಎಂದು ಟೀಕಿಸಿದರು. 

''1949 ನವೆಂಬರ್ 25 ರಂದು ಅಂಬೇಡ್ಕರ್ ಅವರು ತಮ್ಮ ಐತಿಹಾಸಿಕ ಭಾಷಣದಲ್ಲಿ, "ನಮ್ಮ ಸಂವಿಧಾನ ಜನವರಿ 26 ರಿಂದ ಜಾರಿಗೆ ಬರುತ್ತದೆ. ಆದರೆ ಸಾಮಾಜಿಕ-ಆರ್ಥಿಕ‌ ಅಸಮಾನತೆ ದೇಶದಲ್ಲಿದೆ. ಈ ಅಸಮಾನತೆಯನ್ನು ಅಳಿಸದೇ ಹೋದರೆ ಜನರೇ ಈ ಸ್ವಾತಂತ್ರ್ಯ ಸೌಧವನ್ನು ಸುಟ್ಟು ಭಸ್ಮ ಮಾಡುತ್ತಾರೆ" ಎಂದಿದ್ದರು.‌ ಈ ಕಾರಣಕ್ಕೇ ಅಸಮಾನತೆ, ತಾರತಮ್ಯವನ್ನು ಅಳಿಸುವ ದೃಷ್ಟಿಯಿಂದ ಬಜೆಟ್ ನಲ್ಲಿ ಸರ್ವರಿಗೂ ಸಮಾನ ಅವಕಾಶ ಸಿಗುವ ಆಶಯದ ಕಾರ್ಯಕ್ರಮಗಳಿಗೆ ಮಹತ್ವ ನೀಡಿದ್ದೇನೆ'' ಎಂದು ತಿಳಿಸಿದರು. 

''ಶ್ರಮಿಕರ,ಬಡವರ ಹಣ ಕಿತ್ತು ಶ್ರೀಮಂತ ಕಾರ್ಪೋರೇಟ್ ಗಳಿಗೆ ಕೊಡುವುದು ಬಿಜೆಪಿಯ ಆರ್ಥಿಕತೆ. ಈ ಕಾರಣಕ್ಕೇ ಹಾಲು, ಮೊಸರು, ಮಂಡಕ್ಕಿ ಮೇಲೂ ತೆರಿಗೆ ಹಾಕಿದ್ದಾರೆ. ಶ್ರೀಮಂತ ಕಾರ್ಪೋರೇಟ್ ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದರೆ ಒಪ್ಪುತ್ತಿಲ್ಲ'' ಎಂದು ವಾಗ್ದಾಳಿ ನಡೆಸಿದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News