ಮಧುಮೇಹದ ಕಾರಣ ನೀಡಿ ಪತ್ನಿಗೆ ಜೀವನಾಂಶ ನಿರಾಕರಿಸಲಾಗದು: ಹೈಕೋರ್ಟ್

Update: 2023-08-21 17:57 GMT

ಬೆಂಗಳೂರು, ಆ.21: ಮಧುಮೇಹದಂತಹ ಕಾಯಿಲೆಯ ಕಾರಣ ನೀಡಿ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡುವುದನ್ನು ನಿರಾಕರಿಸಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಪತ್ನಿ ಮತ್ತು ಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ರೂ.ಗಳ ಜೀವನಾಂಶ ನೀಡುವಂತೆ ಸೂಚನೆ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬೆಂಗಳೂರಿನ ಕೆ.ಜಿ. ಅನಂತಕುಮಾರ್ ಎಂಬುವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಜೀವನಾಂಶವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು. ಅಲ್ಲದೇ, ಜಗತ್ತಿನಾದ್ಯಂತ ಬಹುತೇಕ ಜನಸಂಖ್ಯೆ ಮಧುಮೇಹದಿಂದ ಬಳಲುತ್ತಿದ್ದಾರೆ. ವೈದ್ಯಕೀಯ ವಿಜ್ಞಾನ ಸಾಕಷ್ಟು ಮುಂದುವರಿದಿದ್ದು, ಅದನ್ನು ನಿರ್ವಹಣೆ ಮಾಡಬಹುದು.

ಸೂಕ್ತ ವೈದ್ಯಕೀಯ ಆರೈಕೆ ಇದ್ದರೆ ಆ ಕಾಯಿಲೆಯನ್ನು ನಿರ್ವಹಿಸಬಹುದು. ಆದರೆ, ಮಧುಮೇಹವಿದೆ ಎಂಬ ಕಾರಣಕ್ಕೆ ಜೀವನಾಂಶ ಪಾವತಿಯಿಂದ ತಪ್ಪಿಸಿಕೊಳ್ಳಲಾಗದು ಎಂದು ಪೀಠ ತಿಳಿಸಿದೆ.

ಪತ್ನಿ ತನ್ನ ಜೀವನಕ್ಕೆ ಮತ್ತು ಮಗುವಿನ ಆರೈಕೆ ಸಾಕಾಗುವಷ್ಟು ದುಡಿಯುತ್ತಿದ್ದರೂ ಸಹ ಸಂಸತ್ ಅನುಮೋದಿಸಿರುವ ಅಪರಾಧ ದಂಡ ಸಂಹಿತೆ ಸೆಕ್ಷನ್ 125, ಮಹಿಳೆಯರ ವಿರುದ್ಧದ ಕೌಟುಂಬಿಕದ ದೌರ್ಜನ್ಯ ತಡೆ ಕಾಯಿದೆ 2005 ಮತ್ತು ಹಿಂದೂ ವಿವಾಹ ಕಾಯಿದೆ 1955ರ ಸೆಕ್ಷನ್ 24ರ ಯಾವುದೇ ಧರ್ಮಕ್ಕೆ ಸೇರಿದ ವ್ಯಕ್ತಿ ದೈಹಿಕವಾಗಿ ದುಡಿಯುವ ಸಾಮಥ್ರ್ಯವಿದ್ದರೆ ಆತ ಪತ್ನಿ ಹಾಗೂ ಮಕ್ಕಳ ಜೀವನ ನಿರ್ವಹಣೆಗೆ ಜೀವನಾಂಶವನ್ನು ಪಾವತಿಸಲೇಬೇಕು ಎಂದು ನ್ಯಾಯಪೀಠ ಆದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News