ಮೋದಿ ಭಾವಚಿತ್ರ ಹಿಡಿದು ಹೋದರೆ ಮತ ಸಿಗಲ್ಲ: ಬಿಜೆಪಿ ನಾಯಕರ ವಿರುದ್ಧ ರೇಣುಕಾಚಾರ್ಯ ಆಕ್ರೋಶ

Update: 2023-10-09 17:24 GMT

ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ

ಶಿವಮೊಗ್ಗ: ಸೈಕಲ್, ಬೈಕ್, ಕಾರಿನ ಮೂಲಕ ಪಕ್ಷ ಸಂಘಟನೆ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರ ಕಣ್ಣೀರಿನಿಂದ ಬಿಜೆಪಿ ನೆಲಕಚ್ಚಿದೆ. ಯಡಿಯೂರಪ್ಪ ಅವರಂತಹ ನಾಯಕ ದಕ್ಷಿಣ ಭಾರದತದ ಬಿಜೆಪಿಯಲ್ಲಿ ಸಿಗಲಾರರು ಎಂದು ಸ್ವಪಕ್ಷದ ವಿರುದ್ಧ ಮಾಜಿ ಸಚಿವ, ಬಿಜೆಪಿ ನಾಯಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಭಾವಚಿತ್ರ ಹಿಡಿದು ಹೋದರೆ ಮತ ಸಿಗಲ್ಲ. ಯಡಿಯೂರಪ್ಪ ಅವರಿಗೆ ಮಾತ್ರ ಮತ ಗಳಿಸುವ ಶಕ್ತಿ ಇದೆ. ಯಡಿಯೂರಪ್ಪರನ್ನು ಕಡೆಗಣಿಸಿ ರಬ್ಬರ್ ಸ್ಟಾಂಪ್ ರಾಜ್ಯಾಧ್ಯಕ್ಷ ಬೇಕಾ ಎಂದು ಪ್ರಶ್ನಿಸಿದರು.

ರಾಜ್ಯಸಭೆ, ವಿಧಾನಪರಿಷತ್ ಗೆ ನೇಮಕ ಆದವರು ಯಾರಿಗೋ ಮಂಡಿಯೂರಿದ್ದಾರೆ. ಹೋರಾಟದ ಹಿನ್ನೆಲೆಯಿಂದ ಬಂದವರು ಯಡಿಯೂರಪ್ಪ. ನಾನೂ ಪಾದಯಾತ್ರೆ ಮಾಡಿ ಬಂದವನು. ರಾಜ್ಯದಲ್ಲಿ ಯಡಿಯೂರಪ್ಪರನ್ನು ನಿರ್ಲಕ್ಷಿಸಿದರೆ ಬಿಜೆಪಿ ಇನ್ನಷ್ಟು ನೆಲೆ ಕಚ್ಚುತ್ತದೆ. ಯಡಿಯೂರಪ್ಪ ಒಬ್ಬ ಶಿಲ್ಪಿ ಇದ್ದಂತೆ. ನಾನೊಬ್ಬ ಕಾಡುಗೊಲ್ಲನಾಗಿದ್ದೆ. ನನ್ನನ್ನು ಪರಿವರ್ತನೆ ಮಾಡಿದವರು ಯಡಿಯೂರಪ್ಪ. ಅವರು ಇಲ್ಲದಿದ್ದರೆ ನಾನು ಬೀಡಿ ಸೇದುತ್ತಾ, ಎಣ್ಣೆ ಹೊಡ್ಕೊಂಡು ಇರುತ್ತಿದ್ದೆ ಎಂದು ನುಡಿದರು.

ಶೀಘ್ರವೇ ಪಂಚರಾಜ್ಯ ಚುನಾವಣೆ ನಡೆಯಲಿದೆ. ನಂತರ ಲೋಕಸಭೆ ಚುನಾವಣೆ ನಡೆಯುತ್ತೆ. ಅಷ್ಟರಲ್ಲಿ ರಾಜ್ಯಕ್ಕೆ ವರ್ಚಸ್ಸು ಇರುವ ನಾಯಕನ ಅಗತ್ಯವಿದೆ. ಆದರೆ, ಇನ್ನೂ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಇಲ್ಲದಿರುವುದು ದುರಂತ ಎಂದು ರೇಣುಕಾಚಾರ್ಯ ಹೇಳಿದರು.

ಗುಜರಾತ್ ಮಾದರಿ ಮಾಡಲು ಹೋಗಿ 70 ಜನ ಹೊಸಬರಿಗೆ ಟಿಕೆಟ್ ನೀಡಿದರು. ಜಗದೀಶ್ ಶೆಟ್ಟರ್ ಅಂತಹವರನ್ನು ಕಡೆಗೆಣಿಸಿದರು. ಯಡಿಯೂರಪ್ಪನವರು ಎಲ್ಲ ಸಮುದಾಯದವರಿಗೆ ಮೀಸಲಾತಿ ಕೊಡಲು ಹೋಗಿದ್ದರು. ಆದರೆ, ಅದಕ್ಕೂ ತಡೆ ಹಾಕಿದರು ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಜ್ಯ ಬಿಜೆಪಿ ವಿಸರ್ಜಿಸಿ’

ಯಡಿಯೂರಪ್ಪರನ್ನು ಬಿಟ್ಟು ಬಿಜೆಪಿ ನಿಯಂತ್ರಣ ಮಾಡಿದರೆ ಆಗುತ್ತಾ? ಕೋರ್ ಕಮಿಟಿ ಯಾಕೆ ಬೇಕು? ನಿಮ್ಮ ನಿಯಂತ್ರಣದಲ್ಲಿ ಬಿಜೆಪಿ ಬೇಕಾ? ರಾಜ್ಯ ಬಿಜೆಪಿ ವಿಸರ್ಜನೆ ಮಾಡಿ ಬಿಡಿ. ಯಡಿಯೂರಪ್ಪರನ್ನು ಮುಗಿಸಿದ್ದೀರಲ್ಲ, ಈಗ ನಾಯಕತ್ವ ಎಲ್ಲಿದೆ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಆತ್ಮಾವಲೋಕನ ಮಾಡಿಕೊಳ್ಳಿ. ಸರ್ವಾಧಿಕಾರಿ ಧೋರಣೆ ಮಾಡಬೇಡಿ ಎಂದು ಹರಿಹಾಯ್ದರು.

ರಾಗಿಗುಡ್ಡದ ಗಲಭೆ ವಿಚಾರದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಯಾರೂ ಮಾಡಬಾರದು. ರಾಗಿಗುಡ್ಡದಲ್ಲಿ ನಡೆದ ಗಲಭೆ ಪ್ರಕರಣದ ತಪ್ಪಿತಸ್ಥರನ್ನು ಎನ್ ಕೌಂಟರ್ ಮಾಡಬೇಕು ಎಂದು ರೇಣುಕಾಚಾರ್ಯ ಹೇಳಿದ್ದಾರೆ.

“ಖಡ್ಗ, ಔರಂಗಜೇಬನ ಚಿತ್ರ ಪ್ರದರ್ಶನ ಸಂಘರ್ಷಕ್ಕೆ ಕಾರಣವಾಗುತ್ತದೆ. ಜಿಲ್ಲಾಡಳಿತ ತಡೆಯಬೇಕಿತ್ತು, ಅದನ್ನು ಮಾಡಿಲ್ಲ. ಮತಗಳನ್ನು ವಿಭಜನೆ ಮಾಡುವ ಕಾರ್ಯ ನಡೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News