ಚಂದ್ರಶೇಖರನಾಥ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ ಹಿನ್ನಲೆ ಸರಕಾರ ಪ್ರಕರಣವನ್ನು ವಾಪಸ್ ಪಡೆಯಲಿ : ಡಿ.ಕೆ.ಸುರೇಶ್
ಬೆಂಗಳೂರು : "ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ದಾಖಲಿಸಲಾಗಿರುವ ಪ್ರಕರಣವನ್ನು ರಾಜ್ಯ ಸರಕಾರ ವಾಪಸ್ ಪಡೆಯಲಿ" ಎಂದು ಮಾಜಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮುಸ್ಲಿಮರ ಮತದಾನದ ಹಕ್ಕಿನ ಕುರಿತ ವಿವಾದಾತ್ಮಕ ಹೇಳಿಕೆಗೆ ಸ್ವಾಮೀಜಿಗಳು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು, ಸಂವಿಧಾನವು ಎಲ್ಲರಿಗೂ ಒಂದೇ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸ್ವಾಮೀಜಿಗಳು ಸಾಂದರ್ಭಿಕವಾಗಿ ಆ ಮಾತು ಆಡಿದ್ದಾಗಿ ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯ ಸರಕಾರ ದೂರನ್ನು ದಾಖಲು ಮಾಡಿದೆ. ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧದ ದೂರು ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡುತ್ತೇನೆ" ಎಂದರು.
ʼಬಿಜೆಪಿಯವರು ಯತ್ನಾಳ್ ವಿರುದ್ಧ ಹೋರಾಟ ಮಾಡುತ್ತಾರೆಯೇ ಅಥವಾ ಕಾಂಗ್ರೆಸ್ ವಿರುದ್ಧ ಮಾಡುತ್ತಾರೆಯೇ ಗೊತ್ತಿಲ್ಲ. ಆದರೆ ನಾವು ಅಭಿವೃದ್ದಿಯ ದೃಷ್ಠಿಯಿಂದ ಮುನ್ನಡೆಯುತ್ತೇವೆ. ಅಲ್ಲದೆ, ವಿರೋಧ ಪಕ್ಷಗಳು ಕೂಡ ರಾಜ್ಯದ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಿʼ ಎಂದು ಹೇಳಿದರು.