ಭೂ ಕಬಳಿಕೆ, ಜಾತಿ ನಿಂದನೆ ಆರೋಪ: ಸಚಿವ ಡಿ.ಸುಧಾಕರ್ ವಿರುದ್ಧ ಪ್ರಕರಣ ದಾಖಲು

Update: 2023-09-11 18:01 GMT

ಬೆಂಗಳೂರು: ಭೂ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ ಆರೋಪದಡಿ, ಯೋಜನೆ ಹಾಗೂ ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರ ವಿರುದ್ಧ ಇಲ್ಲಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುವ ಬಗ್ಗೆ ವರದಿಯಾಗಿದೆ.

ಸುಬ್ಬಮ್ಮ ಎಂಬವರು ನೀಡಿದ ದೂರನ್ನು ಆಧರಿಸಿ ಸಚಿವ ಡಿ.ಸುಧಾಕರ್, ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬುವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ, ವಂಚನೆ, ಹಲ್ಲೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಸಚಿವ ಡಿ.ಸುಧಾಕರ್ ಅವರನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ.

ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಕಂಪೆನಿಯ ಪಾಲುದಾರರಾದ ಸಚಿವ ಡಿ.ಸುಧಾಕರ್ ಅವರು ಯಲಹಂಕ ಗ್ರಾಮದ ಸರ್ವೆ ನಂ. 108/1ರ ಜಮೀನನ್ನು ಮೋಸದಿಂದ ಕಬಳಿಸಿದ್ದಾರೆ. ಈ ಜಮೀನಿನ ವಿವಾದ ಕೋರ್ಟ್‍ನಲ್ಲಿ ಬಾಕಿಯಿದ್ದರೂ, ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಲಾಗಿದೆ. ಕುಟುಂಬದ ಮಹಿಳೆಯರನ್ನು ಹೊರಹಾಕಿ ಜೆಸಿಬಿ ಯಂತ್ರ ಬಳಸಿ ಮನೆಯನ್ನು ಕೆಡವಲಾಗಿದೆ ಎಂದು ದೂರುದಾರೆ ಸುಬ್ಬಮ್ಮ ಆರೋಪಿಸಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News