ರಾಜ್ಯದ ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ ಕರವೇ ನಾರಾಯಣಗೌಡ

Update: 2023-09-13 16:48 GMT

ಬೆಂಗಳೂರು, ಸೆ. 13: ‘ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಸಂಸದರು ಮೌನ ವಹಿಸಿದ್ದು, ಅವರ ಈ ಕ್ರಮವನ್ನು ಖಂಡಿಸಿ ಸಂಸದರ ಮನೆಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ನುಗ್ಗಿಸುತ್ತೇವೆ’ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾವೇರಿ ನದಿ ನೀರು ವಿಚಾರದಲ್ಲಿ ನಾವು ಭುಗಿಲೇಳಬೇಕಿದೆ. ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಆದೇಶವಿದ್ದು, ನಾವು ಈ ಆದೇಶವನ್ನು ಧಿಕ್ಕರಿಸುತ್ತೇವೆ. ನಮ್ಮಲ್ಲಿ ನೀರಿಲ್ಲ, ಇಂತಹ ಸ್ಥಿತಿಯಲ್ಲಿ ದಿಲ್ಲಿಯಲ್ಲಿ ಕುಳಿತು ನೀರು ಕೊಡಿ ಎಂದರೆ ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

‘ತಮಿಳುನಾಡಿಗೆ ನೀರು ಕೊಡಲು ಹೇಗೆ ಸಾಧ್ಯ?, ಏನಾದರೂ ಬೇಕಾದರೂ ಆಗಲಿ, ನಮ್ಮ ಮೇಲೆ ಲಾಠಿ ಚಾರ್ಜ್ ಆಗಲಿ, ಫೈರ್ ಮಾಡಿ, ಜೈಲಿಗೆ ಹಾಕಿದರೂ ನಾವು ಹೆದರುವುದು ಇಲ್ಲ. ಕಾವೇರಿ ಕನ್ನಡಿಗರ ಜೀವನದಿ. ಅದರ ರಕ್ಷಣೆಗಾಗಿ ನಾವು ಏನು ಬೇಕಾದರೂ ಮಾಡಲು ತಯಾರಿದ್ದೇವೆ’ ಎಂದು ಅವರು ತಿಳಿಸಿದರು.

ಆಗಸ್ಟ್ 29ರಿಂದ ಸೆಪ್ಟೆಂಬರ್ 12ರ ವರೆಗೆ ಪ್ರತಿದಿನ 5ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಿದ್ದು, ನಾವು ಯಾರು ಅದಕ್ಕೆ ಧ್ವನಿ ಎತ್ತಲಿಲ್ಲ. ಇವತ್ತು ಮತ್ತೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡಲೇಬೇಕು ಎಂದು ಆದೇಶ ಮಾಡುವುದಾದರೇ ನಾವು ಧಿಕ್ಕರಿಸುತ್ತೇವೆ. ಇಲ್ಲಿನ ರೈತರಿಗೆ ನೀರಿಲ್ಲ, ಬೆಂಗಳೂರಿನ ಜನರಿಗೆ ನೀರಿಲ್ಲ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News