ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಇಲ್ಲದೆ ‘ಒಳಮೀಸಲಾತಿ ನಿರ್ಣಯ’ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಳಮೀಸಲಾತಿ ಪರವಾಗಿ ಸಚಿವ ಸಂಪುಟ ನಿರ್ಣಯ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಒಳಮೀಸಲಾತಿ ಕುರಿತ ಸಚಿವ ಸಂಪುಟ ನಿರ್ಣಯಕ್ಕಾಗಿ ತಮ್ಮನ್ನು ಅಭಿನಂದಿಸಿದ ಮಾದಿಗ ಸಮುದಾಯದ ಮುಖಂಡರು, ಒಳಮೀಸಲಾತಿ ಹೋರಾಟಗಾರರು ಮತ್ತು ಸಮುದಾಯದ ಜನಪ್ರತಿನಿಧಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ಒಳಮೀಸಲಾತಿಗಾಗಿ ಮಾದಿಗ ಸಮುದಾಯ ದಶಕಗಳಿಂದ ಹೋರಾಟ ನಡೆಸಿದೆ. ಇದೀಗ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ನಾವು ಜಾರಿ ಮಾಡಲೇಬೇಕಿದೆ. 101 ಪರಿಶಿಷ್ಟ ಜಾತಿಗಳಿವೆ, ಒಳಮೀಸಲಾತಿ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಎಲ್ಲರನ್ನೂ ಸಮಾಧಾನ ಮಾಡುವುದು ಸಾಧ್ಯವಿಲ್ಲದಿದ್ದರೂ ಶೇ.90ರಷ್ಟು ಸಮುದಾಯಗಳಿಗೆ ಸಮಾಧಾನ ಆಗುವ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇದನ್ನು ನಮ್ಮ ಸರಕಾರ ಮಾಡಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಗೃಹ ಸಚಿವ ಡಾ.ಪರಮೇಶ್ವರ್ ಅವರು ಒಳ ಮೀಸಲಾತಿಗೆ ತಮ್ಮ ವಿರೋಧ ಇಲ್ಲ ಎಂದಿದ್ದಾರೆ. ಹೀಗಾಗಿ ನಮ್ಮಲ್ಲಿ ಎಲ್ಲರೂ ಒಳಮೀಸಲಾತಿ ಪರವಾಗಿದ್ದಾರೆ. ತೆಲಂಗಾಣ ಸರಕಾರ ಈಗಾಗಲೇ ಒಳಮೀಸಲಾತಿ ಜಾರಿ ಸಂಬಂಧ ಒಂದು ಆಯೋಗ ರಚನೆ ಮಾಡಿದ್ದಾಗಿದೆ. ನಾನು ತೆಲಂಗಾಣ ಸಿಎಂ ಜೊತೆಗೂ ಈ ಬಗ್ಗೆ ಚರ್ಚೆ ಮಾಡಿದ್ದೇನೆ. ಹರಿಯಾಣದಲ್ಲೂ ಕ್ಯಾಬಿನೆಟ್ ನಿರ್ಣಯವಾಗಿದೆ. ಆದರೆ, ಆದೇಶವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಮ್ಮ ಸಚಿವ ಸಂಪುಟದಲ್ಲಿ ಹಿಂದೊಮ್ಮೆ ಅನೌಪಚಾರಿಕ ಒಳಮೀಸಲಾತಿ ಕುರಿತು ಚರ್ಚೆ ಮಾಡಿದ್ದೆ. ನಮ್ಮಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಆರ್.ಬಿ.ತಿಮ್ಮಾಪುರ, ಕೆ.ಎಚ್.ಮುನಿಯಪ್ಪ ಸೇರಿ ಎಲ್ಲರೂ ಒಳ ಮೀಸಲಾತಿಗೆ ಒಪ್ಪಿಕೊಂಡಿದ್ದು, ಯಾರದ್ದೂ ವಿರೋಧವಿಲ್ಲ. ಆದರೆ, ಅಗತ್ಯ ಡಾಟಾ(ದತ್ತಾಂಶ) ಬೇಕಾಗಿದೆ ಎನ್ನುವ ಸಂಗತಿ ಚರ್ಚೆಗೆ ಬಂದಿದೆ. ಹೀಗಾಗಿ ಆಯೋಗ ರಚನೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ಆಯೋಗ ಎಲ್ಲ ವರದಿಗಳನ್ನೂ ಅಧ್ಯಯನ ಮಾಡಿ ಅಗತ್ಯ ಅಂಕಿ ಅಂಶ ಸಮೇತ ವರದಿ ನೀಡುತ್ತದೆ. ವರದಿ ಬರುವವರೆಗೂ ಹೊಸದಾಗಿ ಯಾವ ನೇಮಕಾತಿ ನೋಟಿಫಿಕೇಶನ್ ಹೊರಡಿಸುವುದು ಬೇಡ ಎನ್ನುವ ನಿರ್ಣಯವಾಗಿದೆ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಮುದಾಯಗಳನ್ನು ಪರಸ್ಪರ ಸುಳ್ಳುಗಳ ಮೂಲಕ ಎತ್ತಿಕಟ್ಟುವ ಬಿಜೆಪಿ ಕೇಂದ್ರದಲ್ಲಿ ಏಕೆ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಕಾಯ್ದೆ ಜಾರಿ ಮಾಡಿಲ್ಲ?, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಪಡಿಸಲು ನಾವು ಜಾರಿಗೆ ತಂದ ಎಸ್‍ಸಿಎಸ್‍ಪಿ/ಟಿಎಸ್‍ಪಿ ಕಾಯ್ದೆಯನ್ನು ಬಿಜೆಪಿ ಆಡಳಿತದಲ್ಲಿರುವ ಯಾವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ನಾವು ಬಡ್ತಿಯಲ್ಲೂ ಮೀಸಲಾತಿ ತಂದಿದ್ದು, ಬಿಜೆಪಿಯ ಯಾವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ. ಗುತ್ತಿಗೆಯಲ್ಲಿ ಮೀಸಲಾತಿ ತಂದಿದ್ದು ನಮ್ಮ ರಾಜ್ಯ ಮಾತ್ರ. ಇದು ನನ್ನ ಕಮಿಟ್‍ಮೆಂಟ್. ರಾಜಕಾರಣಕ್ಕಾಗಿ ಇದೆಲ್ಲಾ ಮಾಡಿದ್ದಲ್ಲ. ಇದರ ಮುಂದುವರೆದ ಭಾಗವಾಗಿಯೇ ಒಳಮೀಸಲಾತಿ ಜಾರಿಗೆ ಮುಂದಾಗಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸಮಾಜದಲ್ಲಿ ಸಮಾನತೆ ಸುಮ್ಮನೆ ಬರುವುದಿಲ್ಲ. ಈ ರೀತಿ ದಿಟ್ಟ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾತ್ತದೆ. ಒಳಮೀಸಲಾತಿಯ ಹೊಸ ಆಯೋಗದ ವರದಿ ನಿಗದಿತ ಸಮಯದೊಳಗೆ ಬರುವ ನಿರೀಕ್ಷೆ ಇದೆ. ವರದಿ ಬಂದ ತಕ್ಷಣ ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹು ಮಹಾರಾಜ್ ಮತ್ತು ನಾಲ್ವಡಿ ಅರಸರ ಪರಂಪರೆಯವರು. ಅದಕ್ಕಾಗಿಯೇ ಒಳ ಮೀಸಲಾತಿ ಬಗೆಗೆ ಗಟ್ಟಿ ನಿರ್ಧಾರ ಸಾಧ್ಯವಾಗಿದೆ ಎಂದರು.
ಭಾಗ್ಯದ ಬಾಗಿಲು ತೆರೆದ ಸಿದ್ದರಾಮಯ್ಯ: ‘ಮಾದಿಗ ಸಮುದಾಯದ ಭಾಗ್ಯದ ಬಾಗಿಲು ತೆರೆದ ಸಿದ್ದರಾಮಯ್ಯ ಅವರ ಪರವಾಗಿ ಸಮುದಾಯದ ಪ್ರತಿಯೊಬ್ಬರೂ ಇರುತ್ತಾರೆ. ಈಗ ನಡೆಯುವ ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮಾದಿಗ ಸಮುದಾಯದ ಪ್ರತಿಯೊಬ್ಬರೂ ಕೆಲಸ ಮಾಡುತ್ತಾರೆ. ಚರಿತ್ರೆಯಲ್ಲಿ ಅಜರಾಮರವಾಗಿ ಉಳಿಯುವ ಗಟ್ಟಿತನವನ್ನು ಸಿದ್ದರಾಮಯ್ಯ ಪ್ರದರ್ಶಿಸಿದ್ದು, ಅವರಿಗೆ ಸಾವಿರ ಸಾವಿರ ವಂದನೆಗಳು’
-ಎಚ್.ಆಂಜನೇಯ, ಮಾಜಿ ಸಚಿವ