ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಿಜೆಪಿ ನಾಯಕ ಎಂ.ಪಿ ರೇಣುಕಾಚಾರ್ಯ

Update: 2023-08-25 14:33 GMT

ಬೆಂಗಳೂರು, ಆ. 25: ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಆಡಳಿತಾರೂಢ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವ ಬೆನ್ನಲ್ಲೆ, ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ದಿಢೀರ್ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಕುತೂಹಲ ಸೃಷ್ಟಿಸಿದ್ದಾರೆ.

ಶುಕ್ರವಾರ ಉಭಯ ನಾಯಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವ ಎಂ.ಪಿ.ರೇಣುಕಾಚಾರ್ಯ, ‘ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ನಿಟ್ಟಿನಲ್ಲಿ ಟಿಕೆಟ್‍ಗಾಗಿ ಬೇಡಿಕೆ ಇಟ್ಟಿದ್ದೇನೆ. ಆದರೆ, ವರಿಷ್ಠರು ಏನು ಹೇಳುತ್ತಾರೆಯೋ ನೋಡಬೇಕು’ ಎಂದು ತಮ್ಮದೆ ದಾಟಿಯಲ್ಲೇ ಪ್ರತಿಕ್ರಿಯೆ ನೀಡಿದ್ದು ರಾಜಕೀಯ ಅಚ್ಚರಿ ಮೂಡಿಸಿದ್ದಾರೆ.

ನಾನು ಬಿಜೆಪಿಯಲ್ಲೆ ಇದ್ದೇನೆ: ‘ಯಾರು ಬಿಜೆಪಿ ಬಿಡುತ್ತಾರೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ. ಆದರೆ, ನಾನು ಮಾತ್ರ ಇನ್ನೂ ಬಿಜೆಪಿಯಲ್ಲೇ ಇದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವಂತೆ ನನಗೆ ಯಾರು ಕೂಡ ಆಫರ್ ನೀಡಿಲ್ಲ’ ಎಂದು ಖುದ್ದು ರೇಣುಕಾಚಾರ್ಯ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಂ.ಪಿ.ರೇಣುಕಾಚಾರ್ಯ, ‘ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಅವರನ್ನು ಖುದ್ದು ಭೇಟಿ ಮಾಡಿ ಶುಭಾಶಯ ಕೋರಲು ತೆರಳಿದ್ದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ’ ಎಂದು ವಿವರಣೆ ನೀಡಿದರು.

‘ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಮಳೆ ಕೊರತೆ ಉಂಟಾಗಿದ್ದು, ಆ ಎರಡೂ ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲು ಮನವಿ ಮಾಡಿದ್ದೇನೆ’ ಎಂದ ರೇಣುಕಾಚಾರ್ಯ, ‘ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಈ ತಾಲೂಕಿನ ಜನತೆ ನನಗೆ ರಾಜಕೀಯ ಭವಿಷ್ಯ ನೀಡಿದ್ದಾರೆ. ಹಾಗಾಗಿ ಜನರ ಪರವಾಗಿ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News