ಮನೆ-ಮನೆಗೆ ತೆರಳಿ ಆರೋಗ್ಯ ತಪಾಸಣೆ : ‘ಗೃಹ ಆರೋಗ್ಯ’ ಯೋಜನೆಯನ್ನು ಲೋಕಾರ್ಪಣೆಗೊಳಿಸಿದ ಸಿಎಂ

Update: 2024-10-24 14:36 GMT

ಬೆಂಗಳೂರು : ‘ಮನೆ ಮನೆಗೆ ತೆರಳಿ ರಾಜ್ಯದ ಜನರ ಆರೋಗ್ಯ ತಪಾಸಣೆ ನಡೆಸುವ ಮಹತ್ವದ ಜನಾರೋಗ್ಯ ಕಾರ್ಯಕ್ರಮವಾದ ‘ಗೃಹ ಆರೋಗ್ಯ’ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದ್ದಾರೆ.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಯೋಜನೆಗೆ ಚಾಲನೆ ನೀಡಿ, ರೋಗಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಪ್ರತಿಯೊಬ್ಬರ ಮನೆಗೆ ತೆರಳಿ ಉಚಿತ ಚಿಕಿತ್ಸೆ ನೀಡುವ ಮಹತ್ವದ ಕಾರ್ಯಕ್ರಮ ಆರಂಭಿಸಿದ್ದೇವೆ. ಮನೆ ಬಾಗಿಲಿಗೆ ಆರೋಗ್ಯ ಸವಲತ್ತು ಒದಗಿಸುವ ಗುರಿ ನಮ್ಮ ಸರಕಾರದ್ದಾಗಿದೆ’ ಎಂದರು.

‘ಕಾಯಿಲೆಗಳನ್ನು, ಆರೋಗ್ಯ ಸಮಸ್ಯೆಗಳನ್ನು ಗುಟ್ಟಾಗಿ ಇಟ್ಟು ಅನಾಹುತ ತಂದುಕೊಳ್ಳಬಾರದು. ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಬಡವರಿಗೂ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲು ಸಾಧ್ಯ ಆಗಲಿ ಎನ್ನುವ ಕಾರಣದಿಂದಲೇ ಮನೆಬಾಗಿಲಿಗೆ ಆರೋಗ್ಯ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಹಳ ಜನರಿಗೆ ವೈದ್ಯರಿಗೆ ತಪಾಸಣೆ ವೆಚ್ಚ ಕೊಡುವುದಕ್ಕೂ ಸಾಧ್ಯವಾಗುವುದಿಲ್ಲ. ಆದರೆ, ಇಂತಹವರಿಗೂ ಆರೋಗ್ಯದ ಹಕ್ಕು ಇದೆ. ತಪಾಸಣೆಯಿಂದ ಸಾಂಕ್ರಾಮಿಕ ರೋಗಗಳು, ಸಾಂಕ್ರಾಮಿಕವಲ್ಲದ ರೋಗಗಳೂ ಪತ್ತೆಯಾಗುತ್ತವೆ. ಬಹಳ ಜನ ಆರೋಗ್ಯ ತಪಾಸಣೆಯನ್ನೇ ಮಾಡಿಸಿಕೊಂಡಿರುವುದಿಲ್ಲ. ಹೀಗಾಗಿ ಮನೆ ಮನೆಗೆ ತೆರಳಿ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕ್ಯಾನ್ಸರ್ ಕೂಡಿ ಎಲ್ಲ ರೋಗಗಳು ಆರಂಭದಲ್ಲೇ ಪತ್ತೆಯಾದರೆ ಗುಣಪಡಿಸಲು ಸಾಧ್ಯವಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡವನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಶಿಸ್ತಿನ ವ್ಯಾಯಾಮ ಯುಕ್ತ ಜೀವನಶೈಲಿ ಮುಖ್ಯ. ಒತ್ತಡದ ಜೀವನದಿಂದಲೂ ಕಾಯಿಲೆಗಳು ಬರುತ್ತವೆ. ಈಗ ರಸಾಯನಿಕ ಬಳಸಿದ ಆಹಾರದ ಸೇವನೆ ಹೆಚ್ಚಾಗಿರುವುದರಿಂದಲೂ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಮೊಟ್ಟೆ, ಮೀನು, ಮಾಂಸ ತಿಂದರೆ ಡಯಾಬಿಟಿಕ್ ಬರುತ್ತದೆ, ಹೆಚ್ಚುತ್ತದೆ ಎನ್ನುವ ತಪ್ಪುಕಲ್ಪನೆ ಇದೆ. ಹಾಗೇನೂ ಇಲ್ಲ. ಮೊಟ್ಟೆ ಮಾಂಸ ಬಿಟ್ಟು ಬರೀ ಅನ್ನ ತಿಂದರೆ ಹೇಗೆ, ಬ್ಯಾಲೆನ್ಸ್ ಆಹಾರ ಸೇವನೆ ಮುಖ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಪರಿಷತ್ ಸದಸ್ಯ ಸುಧಾಮ ದಾಸ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು.

30 ವರ್ಷಗಳಿಂದ ಸಕ್ಕರೆ ಕಾಯಿಲೆ ನಿರ್ವಹಿಸುತ್ತಿದ್ದೇನೆ: ‘ನಾನು 30 ವರ್ಷಗಳಿಂದ ಸಕ್ಕರೆ ಕಾಯಿಲೆಯನ್ನು ನಿರ್ವಹಿಸುತ್ತಿದ್ದೇನೆ. ವ್ಯಾಯಾಮ, ಶಿಸ್ತಿನ ಜೀವನಶೈಲಿಯಿಂದ ಡಯಾಬಿಟಿಕ್ ನಿಯಂತ್ರಿಸಬಹುದು. ನಾನು ಸ್ಟಂಟ್ ಹಾಕಿಸಿಕೊಂಡು 24 ವರ್ಷವಾಯಿತು. ಪಕ್ಷದ ಕೆಲಸವನ್ನೂ ಮಾಡುತ್ತೇನೆ, ಸರಕಾರದ ಕೆಲಸವನ್ನೂ ಮಾಡುತ್ತೇನೆ, ವ್ಯಾಯಾಮವನ್ನೂ ಮಾಡುತ್ತೇನೆ, ಅರಾಮಾಗಿ ಎಲ್ಲ ಕೆಲಸ, ಕಾರ್ಯಗಳಲ್ಲೂ ಭಾಗವಹಿಸುತ್ತಿದ್ದೇನೆ. ಆದರೆ, ವೈದ್ಯರು ಹೇಳಿದಂತೆ ಕೇಳುತ್ತೇನೆ. ಹೀಗಾಗಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗಿದೆ’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News