ವಕ್ಫ್ ಆಸ್ತಿ ಘೋಷಣೆ, ಅಧಿಕಾರ ದುರ್ಬಳಕೆ ವಿರುದ್ಧ ಬಿಜೆಪಿಯಿಂದ ಜನಾಂದೋಲನ : ಸಿ.ಎನ್.ಅಶ್ವತ್ಥನಾರಾಯಣ್

Update: 2024-11-02 12:42 GMT

ಸಿ.ಎನ್.ಅಶ್ವತ್ಥನಾರಾಯಣ್

ಬೆಂಗಳೂರು: ರಾಜ್ಯದಲ್ಲಿ ಮಠ, ಮಂದಿರಗಳು, ರೈತರ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ನಮೂದಿಸಿದ್ದರ ವಿರುದ್ಧ ಬಿಜೆಪಿ ಜನಾಂದೋಲನ ರೂಪಿಸಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ʼ1974ರ ವಕ್ಫ್ ಆಸ್ತಿ ಕುರಿತ ಗಜೆಟ್ ಅಧಿಸೂಚನೆ ಹಿಂಪಡೆಯಲು ಆಗ್ರಹಿಸಿ ಮತ್ತು ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆಗೆ ಆಗ್ರಹಿಸಿ ಇದೇ ನ.4ರಂದು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲಾಗುವುದುʼ ಎಂದು ಪ್ರಕಟಿಸಿದರು.

ʼಕರ್ನಾಟಕದ ವಕ್ಫ್ ನಲ್ಲಿ ನಡೆದಿರುವ ಖೊಟ್ಟಿ (ನಕಲಿ) ದಾಖಲೆಗಳ ಸೃಷ್ಟಿ, ಆ ಮೂಲಕ ಮಾಡಿಕೊಂಡಿರುವ ಲಾಭದ ಕುರಿತು ಈ.ಡಿ. (ಜಾರಿ ನಿರ್ದೇಶನಾಲಯ) ತನಿಖೆಯಾಗಬೇಕು. 50 ವರ್ಷದ ಹಿಂದಿನ ಗೆಜೆಟ್ ನೆಪ ಒಡ್ಡಿ 50 ವರ್ಷ ಯಾವುದೇ ಕ್ರಮ ಕೈಗೊಳ್ಳದೇ, ಈಗ ಅಲ್ಪಸಂಖ್ಯಾತರ ಮತ ಬ್ಯಾಂಕ್ ರಾಜಕಾರಣಕ್ಕಾಗಿ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ, ಕರ್ನಾಟಕ ವಕ್ಫ್ ಬೋರ್ಡ್ ಮೂಲಕ ಮಾಡಿರುವ ಬೃಹತ್ ದಾಖಲೆಗಳ ಸೃಷ್ಟಿಯ ಎಲ್ಲಾ ವ್ಯವಹಾರಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕುʼ ಎಂದು ಆಗ್ರಹಿಸಿದರು.

ʼರಾಜ್ಯದಲ್ಲಿ ಇಂದು ವಕ್ಫ್ ಕಾಯ್ದೆಯ ದುರ್ಬಳಕೆಯ ಕಾರಣಕ್ಕಾಗಿ ರೈತರು ಮಠಮಾನ್ಯಗಳು, ಹಿಂದೂ ದೇವಾಲಯಗಳು ಎಲ್ಲರೂ ಸೇರಿದಂತೆ ಆತಂಕದಲ್ಲಿದ್ದಾರೆ. ಹಿಂದೆ ಕಾಂಗ್ರೆಸ್ ನವರು ರೂಪಿಸಿರುವ ವಕ್ಫ್ ಕಾಯ್ದೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಮತಗಳಿಕೆಯ ಆಸೆಯೊಂದಿಗೆ ರಚಿಸಿರುವ ಕಾಯ್ದೆಯಾಗಿದೆʼ ಎಂದು ಟೀಕಿಸಿದರು.

ʼರೈತರು ವಿಭಿನ್ನ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಆಸ್ತಿ ಕಳೆದುಕೊಳ್ಳುವ ಭೀತಿ ನಿರ್ಮಾಣವಾಗಿದೆ. ಈ ಸಂಬಂಧ ಕೇವಲ ನೋಟಿಸ್ ಹಿಂಪಡೆದರೆ ಸಾಲದು. ರೈತರ ಆಸ್ತಿಗಳಲ್ಲಿ ರೈತರ ಹೆಸರನ್ನು ನಮೂದಿಸಬೇಕು. ಅಲ್ಲದೆ, 1974ರ ವಕ್ಫ್ ಆಸ್ತಿ ಕುರಿತ ಗಜೆಟ್ ಅಧಿಸೂಚನೆ ಹಿಂಪಡೆಯಬೇಕುʼ ಎಂದು ಒತ್ತಾಯಿಸಿದರು.

ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ತೇಜಸ್ವಿ ಸೂರ್ಯ, ರಾಜ್ಯ ಕಾರ್ಯದರ್ಶಿ ಎಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ, ಪಕ್ಷದ ಪ್ರಮುಖರು ಇದ್ದರು.

ರಾಜ್ಯದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳು ಅವೈಜ್ಞಾನಿಕ ಎಂದು ಖರ್ಗೆಯವರು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬಜೆಟ್ ನೋಡಿ ಗ್ಯಾರಂಟಿ ಘೋಷಿಸಬೇಕಿತ್ತು ಎಂದು ಅವರೇ ಹೇಳಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರದ ಅನೇಕ ಶಾಸಕರು ಅಭಿವೃದ್ಧಿ ಇಲ್ಲದ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ.

- ಆರ್.ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News