ಪ್ರಧಾನಿ ಸಾಧ್ಯವಿಲ್ಲ ಎಂದಿರುವುದನ್ನು ಸಾಧಿಸುವುದೇ ಕಾಂಗ್ರೆಸ್ ಪಕ್ಷದ ಗುರಿ : ಮಾಜಿ ಸಂಸದ ಡಿ.ಕೆ.ಸುರೇಶ್

Update: 2024-11-02 11:55 GMT
ಡಿ.ಕೆ.ಸುರೇಶ್/ನರೇಂದ್ರ ಮೋದಿ(PTI)

ಬೆಂಗಳೂರು: "ಪ್ರಧಾನಮಂತ್ರಿಗಳು ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದನ್ನು ಈಡೇರಿಸುವುದೇ ಕಾಂಗ್ರೆಸ್ ಗುರಿ. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳಿಂದ ಯಾವತ್ತೂ ಹಿಂದೆ ಸರಿದಿಲ್ಲ" ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ತಿಳಿಸಿದರು.

ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು "ನಮ್ಮ ಐದೂ ಗ್ಯಾರಂಟಿಗಳು ರಾಜ್ಯದ ಜನರ ಆರ್ಥಿಕ ಶಕ್ತಿ ಹೆಚ್ಚಿಸುತ್ತಿವೆ. ಇದು ಮಾನ್ಯ ಪ್ರಧಾನಮಂತ್ರಿಗಳಿಗೂ ಗೊತ್ತಿದೆ. ಕರ್ನಾಟಕದ ಈ ಮಾದರಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಕಡ್ಡಾಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಕೇಂದ್ರ ಸರಕಾರವು ಈ ಯೋಜನೆಗಳನ್ನು ಅನಿವಾರ್ಯವಾಗಿ ಅಳವಡಿಸಿಕೊಳ್ಳುವ ಪರಿಸ್ಥಿತಿ ಉದ್ಭವವಾಗುತ್ತದೆ ಎಂಬುದನ್ನು ಪ್ರಧಾನಮಂತ್ರಿಗಳು ಅರ್ಥ ಮಾಡಿಕೊಳ್ಳಲಿದ್ದಾರೆ" ಎಂದು ತಿಳಿಸಿದರು.

ಚುನಾವಣೆಯಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನ: 

"ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಹತ್ತಿರದಲ್ಲಿದ್ದು, ಜನರ ಗಮನ ಬೇರೆ ವಿಷಯದ ಕಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಅಧ್ಯಕ್ಷರು. ಅವರು ಆಗಾಗ್ಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಸಲಹೆ ನೀಡುತ್ತಿರುತ್ತಾರೆ. ಈ ಐದು ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸರಕಾರ ಯಾವುದೇ ಚಿಂತನೆ ನಡೆಸಿಲ್ಲ. ಈ ಯೋಜನೆಗಳ ಲೋಪದೋಷಗಳನ್ನು ಸರಿಪಡಿಸಲು ಕೆಲವರು ಸಲಹೆ ಕೊಟ್ಟಿರಬಹುದು. ಇದನ್ನು ಪರಿಗಣಿಸಬೇಕೇ, ಬೇಡವೇ ಎಂಬುದನ್ನು ಸರಕಾರ ತೀರ್ಮಾನ ಮಾಡುತ್ತದೆ. ವಿರೋಧ ಪಕ್ಷಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಅವರು ಸಾಧ್ಯವಾದರೆ ಬೆಂಬಲ ನೀಡಲಿ. ಇಲ್ಲದಿದ್ದರೆ ನೇರವಾಗಿ ವಿರೋಧ ಮಾಡಲಿ. ಕೊಂಕು ಮಾತುಗಳನ್ನು ಆಡುವುದನ್ನು ನಿಲ್ಲಿಸಲಿ" ಎಂದು ತಿರುಗೇಟು ನೀಡಿದರು.

ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು:

ಜನಗಣತಿ ನಂತರ ಕ್ಷೇತ್ರ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗಲಿದೆ ಎಂಬ ಪ್ರಿಯಾಂಕ್‌ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ನಾನು ಬಹಳ ಹಿಂದೆಯೇ ಈ ವಿಚಾರದ ಬಗ್ಗೆ ಹೇಳಿದ್ದೆ. ಕೇಂದ್ರ ಸರಕಾರದಿಂದ ತೆರಿಗೆ ಹಂಚಿಕೆಯಲ್ಲಿ ಮೋಸ ಒಂದು ಭಾಗವಾದರೆ, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಮಾಡುವಾಗ ದಕ್ಷಿಣ ಭಾರತದ ರಾಜ್ಯಗಳಿಗೆ ಮತ್ತಷ್ಟು ಅನ್ಯಾಯವಾಗಲಿದೆ. ನಮ್ಮ ಹಕ್ಕು ಪ್ರತಿಪಾದನೆ ಕಷ್ಟವಾಗುತ್ತದೆ. ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದೆ. ಉತ್ತರ ಪ್ರದೇಶದಲ್ಲಿ ಕ್ಷೇತ್ರಗಳ ಸಂಖ್ಯೆ ದುಪ್ಪಟ್ಟು ಆಗಲಿದ್ದು, ದಕ್ಷಿಣ ಭಾರತದ ಕ್ಷೇತ್ರಗಳ ಸಂಖ್ಯೆ ಕುಸಿಯಲಿದೆ. ಹೀಗಾಗಿ ಬಹಳ ಜವಾಬ್ದಾರಿಯಿಂದ ನಮ್ಮ ಹಕ್ಕು ರಕ್ಷಣೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಧ್ವನಿ ಎತ್ತಬೇಕು" ಎಂದರು.

ಪ್ರಧಾನಿಗಳು ಸತ್ಯಾಸತ್ಯತೆ ಅರಿಯಬೇಕು:

ಪ್ರಧಾನಮಂತ್ರಿಯಾದವರು ಪುಡಾರಿಯಂತೆ ನಡೆದುಕೊಳ್ಳಬಾರದು ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, "ಪ್ರಧಾನಮಂತ್ರಿಗಳಿಗೆ ಅವರದೇ ಆದ ಘನತೆ ಗೌರವವಿದೆ. ಅವರು ಹೇಳಿಕೆ ನೀಡುವ ಮುನ್ನ ಪರಿಶೀಲನೆ ಮಾಡಬೇಕು. ಸತ್ಯಾಸತ್ಯತೆ ಪರಿಶೀಲಿಸದೆ ರಾಜಕೀಯ ಉದ್ದೇಶದಿಂದ ಆತುರದ ಹೇಳಿಕೆ ನೀಡಬಾರದು" ಎಂದು ತಿಳಿಸಿದರು.

ತೆರಿಗೆ ಪಾಲು ಸರಿಯಾಗಿ ಸಿಕ್ಕರೆ ಕರ್ನಾಟಕ ನಂ.1 ಆಗಲಿದೆ:

 "ಕರ್ನಾಟಕ ಪ್ರಗತಿಪರ ರಾಜ್ಯ. ನಮ್ಮ ರಾಜ್ಯದಲ್ಲಿ ಸಾಕಷ್ಟು ಆದಾಯವಿದೆ. ನಾವು ಗ್ಯಾರಂಟಿ ಹಾಗೂ ಅಭಿವೃದ್ಧಿ ನಿಲ್ಲಿಸುವುದಿಲ್ಲ. ನಮಗೆ ಸಿಗಬೇಕಾದ ತೆರಿಗೆ ಪಾಲು ನಮಗೆ ಸಿಕ್ಕರೆ, ದೇಶದಲ್ಲೇ ನಮ್ಮ ರಾಜ್ಯ ನಂಬರ್ ಒನ್ ಸ್ಥಾನಕ್ಕೆ ಏರಲಿದೆ" ಎಂದು ತಿಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News