ಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶದ ವಿರುದ್ಧ ಎಐಸಿಸಿಗೆ ದೂರು

Update: 2024-11-29 07:26 GMT

ಸಿದ್ದರಾಮಯ್ಯ

ಬೆಂಗಳೂರು : ಡಿ.5ರಂದು ವಿವಿಧ ಪ್ರಗತಿಪರ ಸಂಘಟನೆಗಳಿಂದ ಹಾಸನದಲ್ಲಿ ಹಮ್ಮಿಕೊಂಡಿರುವ ʻಸಿದ್ದರಾಮಯ್ಯ ಸ್ವಾಭಿಮಾನಿ ಜನಾಂದೋಲನ ಸಮಾವೇಶʼದ ವಿರುದ್ಧ ಅನಾಮಧೇಯ ವ್ಯಕ್ತಿಯೊಬ್ಬರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರು ಸಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ಹೆಸರನ್ನು ಮರೆಮಾಚಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಪತ್ರ ಬರೆಯಲಾಗಿದೆ.

ಪತ್ರದಲ್ಲೇನಿದೆ :

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ದಿನದಿಂದಲೂ ಕಾಂಗ್ರೆಸ್ ಪಕ್ಷದ ವೇದಿಕೆ ಮತ್ತು ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ದೂರವಿಟ್ಟು ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬಂದಿರುತ್ತಾರೆ.

ಕಳೆದ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಪಕ್ಷವನ್ನು ದೂರವಿಟ್ಟು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಆದರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ನಾಯಕರುಗಳು ಸಹ ಕಾಂಗ್ರೆಸ್ ಪಕ್ಷದವರೇ ಆಗಿದ್ದರು ಪಕ್ಷದ ಚಿಹ್ನೆಯ ಜೊತೆ ಕಾರ್ಯಕ್ರಮವನ್ನು ಮಾಡಿದ್ದರೆ ಪಕ್ಷಕ್ಕೆ ಮತ್ತಷ್ಟು ಬಲಬಂದಂತಾಗುತ್ತಿತ್ತು. ಪಕ್ಷದ ಯಾವ ವರಿಷ್ಠರೂ ಸಹ ಅದರ ಬಗ್ಗೆ ಗಮನ ಹರಿಸಲಿಲ್ಲ.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಎರಡನೇ ಬಾರಿಗೆ ಈ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಚಿಹ್ನೆಯಲ್ಲಿ ಆಯ್ಕೆಯಾಗಿರುವ ರಾಜ್ಯ ಸರಕಾರದ ಕೆಲವು ಮಂತ್ರಿಗಳು ಹಾಗೂ ಶಾಸಕರುಗಳು ಇದೇ ಡಿ.5 ರಂದು ಹಾಸನದಲ್ಲಿ ಸ್ವಾಭಿಮಾನಿಗಳ ಹೆಸರಿನಲ್ಲಿ ತಮಗೆ ಅಧಿಕಾರ ಕೊಟ್ಟಿರುವ ಕಾಂಗ್ರೆಸ್ ಪಕ್ಷ ಮತ್ತು ಸರಕಾರವನ್ನು ದೂರವಿಟ್ಟು ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಬೇಸರದ ಸಂಗತಿ. ಬೇರೆ ಬೇರೆ ನಾಯಕರಗಳು ಸಹ ಇದೇ ರೀತಿ ವೈಯಕ್ತಿಕ ಲಾಭಕ್ಕಾಗಿ ಪಕ್ಷವನ್ನು ದುರುಪಯೋಗಪಡಿಸಿಕೊಂಡರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ಏನಾಗಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಹಿತದೃಷ್ಟಿಯಿಂದ  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಹಾಗೂ ಕೆಲ ಸಚಿವ ಶಾಸಕರುಗಳಿಗೆ ತಿಳಿ ಹೇಳಿ ಪಕ್ಷದ ಚಿಹ್ನೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ದೇಶನ ನೀಡಬೇಕೆಂದು ತಮ್ಮಲ್ಲಿ ವಿನಯ ಪೂರ್ವಕವಾಗಿ ವಿನಂತಿ ಮಾಡುತ್ತೇವೆ.

ಈ ವಿಚಾರವಾಗಿ ತಮ್ಮ ಗಮನಕ್ಕೆ ತರಲು ಬಯಸುವುದೇನೆಂದರೆ ಕಾರ್ಯಕ್ರಮದ ಎಲ್ಲಾ ರೂಪುರೇಷೆಗಳನ್ನು ಕಾಂಗ್ರೆಸ್ ನಾಯಕರೇ ಕಾಂಗ್ರೆಸ್ ಕಚೇರಿಯಲ್ಲಿ ಮಾಡುತ್ತಾರೆ. ಆದರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಚಿಹ್ನೆ ಮಾತ್ರ ಯಾಕೆ ಬೇಡ ಎಂಬುದು ಕಾರ್ಯಕರ್ತರ ಪ್ರಶ್ನೆ. ಇದರ ಬಗ್ಗೆ ವರಿಷ್ಠರಾದ ತಾವು ಸಹ ಗಮನ ಹರಿಸಬೇಕಾಗಿದೆ.

ಅದೇ ರೀತಿ ಮುಖ್ಯಮಂತ್ರಿಗಳಿಗೆ ಕೇಳ ಬಯಸುವುದೇನೆಂದರೆ ತಮಗೆ ಸಂಬಂಧಪಟ್ಟ ಪ್ರತಿ ಕಾರ್ಯಕ್ರಮದಲ್ಲೂ ತಮಗೆ ಅಧಿಕಾರವನ್ನು ಕೊಟ್ಟ ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟು ಕಾರ್ಯಕ್ರಮವನ್ನು ಮಾಡುವ ತಮ್ಮ ಉದ್ದೇಶವಾದರೂ ಏನೆಂದು ದಯಮಾಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಾವು ತಿಳಿಸಬೇಕು ಎಂದು ಮನವಿ ಮಾಡುತ್ತೇವೆ.

ಮೇಲ್ಕಂಡ ವಿಚಾರದ ಬಗ್ಗೆ ಸೂಕ್ಷ್ಮವಾಗಿ ಮತ್ತು ಶೀಘ್ರವಾಗಿ ಕ್ರಮ ಕೈಗೊಂಡು ಯಾವುದೇ ರೀತಿಯ ಸ್ವಾರ್ಥವಿಲ್ಲದೆ ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Delete Edit
Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News