134 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ, ವಾರದೊಳಗೆ ವರದಿ ನೀಡುವಂತೆ ಸೂಚನೆ: ಸಚಿವ ಕೃಷ್ಣಬೈರೇಗೌಡ

Update: 2023-09-04 14:04 GMT

ಬೆಂಗಳೂರು, ಸೆ.4: ರಾಜ್ಯದ ಅನೇಕ ಭಾಗಗಳಲ್ಲಿ ಬರದ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ 134 ತಾಲೂಕುಗಳಲ್ಲಿ ಬೆಳೆ ಸಮೀಕ್ಷೆ ನಡೆಸಿ, ಒಂದು ವಾರದೊಳಗೆ ವರದಿ ನೀಡುವಂತೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಪ್ರಕೃತಿ ವಿಕೋಪದಿಂದ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಪರಾಮರ್ಶಿಸಲು ರಚಿಸಲಾಗಿರುವ ಸಂಪುಟ ಉಪ ಸಮಿತಿ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಜೂನ್ ತಿಂಗಳಲ್ಲಿ ಶೇ.56ರಷ್ಟು ಕೊರತೆ, ಜುಲೈನಲ್ಲಿ ವಾಡಿಕೆಗಿಂತ ಶೇ.28ರಷ್ಟು ಹೆಚ್ಚು ಮಳೆಯಾಗಿತ್ತು. ಆಗಸ್ಟ್‍ನಲ್ಲಿ ವಾಡಿಕೆಗಿಂತ ಶೇ.73ರಷ್ಟು ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ ಶೇ.26ರಷ್ಟು ಮಳೆ ಕೊರತೆಯಾಗಿದೆ. ಆ.19ರಂತೆ 113 ತಾಲೂಕುಗಳಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ(ಕನಿಷ್ಠ ಶೇ.60ರಷ್ಟು ಮಳೆ ಕೊರತೆ, ಮೂರು ವಾರಗಳ ಶುಷ್ಕ ವಾತಾವರಣ ಇರಬೇಕು) ಬೆಳೆ ಸಮೀಕ್ಷೆ ಮಾಡಲು 10 ದಿನಗಳ ಅವಕಾಶ ನೀಡಿ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದರು.

ಅದರಂತೆ, 113 ತಾಲೂಕುಗಳಲ್ಲಿ ಕೇಂದ್ರ ಸರಕಾರದ ಮಾನದಂಡಗಳ ಪ್ರಕಾರ ಸುಮಾರು 62 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿವೆ. ಆದರೆ, ಜಂಟಿ ಸಮೀಕ್ಷೆ ನಂತರ ಬೆಳೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎಂದು ಶಾಸಕರು, ಸಚಿವರು, ರೈತ ಸಂಘಟನೆಗಳು, ಅಧಿಕಾರಿಗಳಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಳಿದ 51 ತಾಲೂಕುಗಳಲ್ಲಿ ಮತ್ತೊಮ್ಮೆ ಬೆಳೆ ಸಮೀಕ್ಷೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಈ 113 ತಾಲೂಕುಗಳು ಹೊರತುಪಡಿಸಿ ಸೆ.2ರಂತೆ ಇನ್ನೂ 83 ತಾಲೂಕುಗಳಲ್ಲಿ ಶುಷ್ಕ ವಾತಾವರಣ ಹಾಗೂ ಶೇ.60ರಷ್ಟು ಮಳೆ ಕೊರತೆಯಾಗಿದೆ. ಈ 83 ತಾಲೂಕುಗಳಲ್ಲಿಯೂ ಬೆಳೆ ಸಮೀಕ್ಷೆ ಮಾಡಲಾಗುವುದು. ಒಟ್ಟಾರೆ 134 ತಾಲೂಕುಗಳಲ್ಲಿ(51 ಹಾಗೂ 83) ಬೆಳೆ ಸಮೀಕ್ಷೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಈಗಾಗಲೆ ಬರ ಘೋಷಣೆಗೆ ಅರ್ಹವಿರುವ 62 ತಾಲೂಕುಗಳ ಜೊತೆಗೆ 134 ತಾಲೂಕುಗಳಲ್ಲಿನ ಬೆಳೆ ಸಮೀಕ್ಷೆ ವರದಿ ಬಂದ ನಂತರ ಒಟ್ಟಾರೆಯಾಗಿ ಎಷ್ಟು ತಾಲೂಕುಗಳಲ್ಲಿ ಬರಪರಿಸ್ಥಿತಿಯಿದೆ ಎಂದು ಪಟ್ಟಿ ಮಾಡಿ, ಅಗತ್ಯ ಮಾಹಿತಿಗಳೊಂದಿಗೆ ಕೇಂದ್ರ ಸರಕಾರಕ್ಕೆ ನೆರವು ಕೋರಿ ಮನವಿ ಸಲ್ಲಿಸಲಾಗುವುದು. ಈ ಸಂಬಂಧ ಈಗಿನಿಂದಲೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಬರ ಘೋಷಣೆಯಾದ ನಂತರ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‍ಫೋರ್ಸ್ ರಚಿಸಲು ತೀರ್ಮಾನಿಸಲಾಗಿದೆ. ಬರ ಘೋಷಣೆಯಾದ ತಾಲೂಕುಗಳಲ್ಲಿ ಕುಡಿಯುವ ನೀರು ಕೊರತೆ ಕಂಡುಬರುವಂತಹ ವಸತಿ ಪ್ರದೇಶಗಳಲ್ಲಿ ಟ್ಯಾಂಕರ್ ಮುಖಾಂತರ ಅಥವಾ ಬಾಡಿಗೆ ಬೋರ್‍ವೆಲ್ ಮುಖಾಂತರ ತುರ್ತು ಕುಡಿಯುವ ನೀರು ಒದಗಿಸುವ ಖರ್ಚುವೆಚ್ಚವನ್ನು ಎಸ್‍ಡಿಆರ್‍ಎಫ್ ಮುಖಾಂತರ ಭರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಜಾನುವಾರುಗಳಿಗೆ ಮೇವು ಲಭ್ಯತೆ ಕುರಿತು ಪರಿಶೀಲನೆ ಮಾಡಿದ್ದೇವೆ. ಕೆಲವು ತಾಲೂಕುಗಳಲ್ಲಿ 18 ರಿಂದ 44 ವಾರದ ವರೆಗೆ ಅವಶ್ಯಕತೆ ಇರುವ ಮೇವು ಲಭ್ಯವಿದೆ. ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಬರಬಹುದು ಎಂದು ಮುಂಜಾಗ್ರತೆಯಾಗಿ ರೈತರಿಗೆ ಮೇವು ಬೆಳೆಯಲು ಅನುಕೂಲವಾಗುವಂತೆ ಬಿತ್ತನೆ ಬೀಜದ ಕಿಟ್‍ಗಳನ್ನು ಉಚಿತವಾಗಿ ವಿತರಿಸಲು ಪಶುಸಂಗೋಪನೆ ಇಲಾಖೆಗೆ 20 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ನರೇಗಾ ಕೂಲಿ ಕಾರ್ಮಿಕರಿಗೆ 100ರ ಬದಲು 150 ದಿನಗಳ ಕೆಲಸ ಸಿಗುವಂತೆ ಆದೇಶ ಮಾಡಲು ನಿರ್ಧರಿಸಲಾಗಿದೆ. 13 ಕೋಟಿ ಮಾನವ ದಿನಗಳ ಮಂಜೂರಾತಿ ಇದೆ. ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಮಾನವ ದಿನಗಳನ್ನು ಮಂಜೂರು ಮಾಡಲು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದ ಖರ್ಚು ವೆಚ್ಚ ಭರಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ 529 ಕೋಟಿ ರೂ.ಗಳು ಲಭ್ಯ ಇದೆ. ಎಸ್‍ಡಿಆರ್‍ಎಫ್‍ನಲ್ಲಿ ನಲ್ಲಿ ಸಾಕಷ್ಟು ಹಣ ಲಭ್ಯವಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ. ಆದರೂ, ನಾವು ಬೆಳೆ ಸಮೀಕ್ಷೆಗೆ ಆದೇಶ ಮಾಡಿದ್ದೇವೆ. ಈಗಾಗಲೆ ಬಿತ್ತನೆ ಮಾಡಿರುವ ಬೆಳೆ ಬಹುತೇಕ ಹಾಳಾಗಿ ಹೋಗಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕೇಂದ್ರ ಸರಕಾರದ ಮಾರ್ಗಸೂಚಿ ನೋಡಿದರೆ ಬರ ಘೋಷಣೆ ಮಾಡಲು ಸಾಧ್ಯವೇ ಇಲ್ಲ. ಈಗಾಗಲೆ ಸಿಎಂ ಇದನ್ನು ಸರಳೀಕರಣ ಮಾಡುವಂತೆ ಕೋರಿ ಪತ್ರ ಬರೆದಿದ್ದಾರೆ. ನಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇವೆ. ಪ್ರಧಾನಿ ಇನ್ನೂ ಮುಖ್ಯಮಂತ್ರಿ ಭೇಟಿಗೆ ಕಾಲಾವಕಾಶ ನೀಡಿಲ್ಲ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ 37 ತಾಲೂಕುಗಳ 105 ಪಂಚಾಯತ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. 16 ಗ್ರಾಮಗಳಲ್ಲಿ 19 ಟ್ಯಾಂಕರ್‍ಗಳ ಮೂಲಕ ಹಾಗೂ 157 ಖಾಸಗಿ ಬೋರ್‍ವೆಲ್‍ಗಳನ್ನು ಬಾಡಿಗೆಗೆ ಪಡೆದು 145 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಇದಕ್ಕಾಗಿ 7 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ. ಅಲ್ಲದೆ, ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ತಲಾ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News