ಬಿಜೆಪಿ ಅವಧಿಯಲ್ಲಿ ಕರ್ನಾಟಕವನ್ನು ಆಳಿರುವುದು ಕೇಶವಕೃಪ: ಕಾಂಗ್ರೆಸ್ ಆರೋಪ

Update: 2023-07-13 08:46 GMT

ಫೋಟೋ| twitter

ಹಿಂದೆ ಬಿಜೆಪಿ ಅವಧಿಯಲ್ಲಿ ರಾಜ್ಯವಾಳುತ್ತಿದ್ದಿದ್ದು ಬೊಮ್ಮಾಯಿಯೂ ಅಲ್ಲ, ಬಿಜೆಪಿಯೂ ಅಲ್ಲ. ಕರ್ನಾಟಕವನ್ನು ಆಳುತ್ತಿದ್ದಿದ್ದು ಕೇಶವಕೃಪ ಎನ್ನುವುದು ಹಲವು ಬಾರಿ ಸಾಬೀತಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, RSS ಸಿದ್ಧಾಂತವನ್ನು ಪಠ್ಯಪುಸ್ತಕಗಳಲ್ಲಿ, ಸರ್ಕಾರದಲ್ಲಿ, ಸಮಾಜದಲ್ಲಿ ಮಾತ್ರವಲ್ಲ, ನ್ಯಾಯಾಂಗದಲ್ಲೂ ವ್ಯವಸ್ಥಿತವಾಗಿ ತೂರಿಸುವ ಪ್ರಯತ್ನ ಮಾಡಲಾಗಿತ್ತು ಎಂಬ ಸಂಗತಿ ಬೆಳಕಿಗೆ ಬಂದಿದೆ ಎಂದು ಹೇಳಿದೆ.

ಅಭಿಯೋಜನೆ ಇಲಾಖೆಯ ವಕೀಲರ ನೇಮಕಾತಿಯಲ್ಲಿ, ಕಾನೂನು ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ಸಂಘಪರಿವಾರದವರಿಗೆ ಮಣೆ ಹಾಕಿರುವುದರ ವಿರುದ್ಧ ಅಭಿಯೋಜನಾ ಇಲಾಖೆಯ ನೌಕರರೇ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ನಮ್ಮ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಿದೆ. ವ್ಯವಸ್ಥೆಯ 'ಸಂಘಿ'ಕರಣಕ್ಕೆ ನಾವು ಎಂದಿಗೂ ಬಿಡುವುದಿಲ್ಲ ಎಂದು ತಿಳಿಸಿದೆ.

ಚುನಾವಣೆ ಫಲಿತಾಂಶ ಬಂದು 2 ತಿಂಗಳಾಯ್ತು, ಅಧಿವೇಶನವೂ ಪ್ರಾರಂಭ ಆಯ್ತು, ಆದರೆ ಬಿಜೆಪಿಯ ವಿರೋಧ ಪಕ್ಷದ ನಾಯಕನೆಲ್ಲಿ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ನಾವಿಕನಿಲ್ಲದ ನೌಕೆ, ನಾಯಕನಿಲ್ಲದ ಬಿಜೆಪಿ ಎರಡೂ ಮುಳುಗುವುದು ನಿಶ್ಚಿತ. ಹಿಂದೆ ಬಿ ಎಸ್ ಯಡಿಯೂರಪ್ಪ ಅವರು ಸಂಪುಟ ರಚನೆಗೆ ತಿಂಗಳುಗಟ್ಟಲೆ ಹೈಕಮಾಂಡ್ ಬಾಗಿಲು ಕಾದಿದ್ದರು. ನಂತರ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಗೆ 15ಕ್ಕೂ ಹೆಚ್ಚು ಬಾರಿ ದೆಹಲಿ ದಂಡಯಾತ್ರೆ ಮಾಡಿದ್ದರು, ಆದರೂ ಸಂಪುಟ ವಿಸ್ತರಣೆಯಾಗಲಿಲ್ಲ. ಈಗ ವಿಪಕ್ಷ ನಾಯಕನ ಆಯ್ಕೆಗೆ ಸತಾಯಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡಿಗೆ ಕರ್ನಾಟಕವನ್ನಷ್ಟೇ ಅಲ್ಲ, ಕರ್ನಾಟಕದ ಬಿಜೆಪಿಯನ್ನು ಕಂಡರೂ ತಾತ್ಸಾರವೇ? ಎಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News