ಬೆಂಗಳೂರಿನಲ್ಲಿ ಮುಂದುವರೆದ ಜಿಟಿಜಿಟಿ ಮಳೆ : ಜನರ ಪರದಾಟ

Update: 2024-10-16 12:35 GMT

ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಸೆರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನಗರದಲ್ಲಿ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಬುಧವಾರವೂ ಮಳೆ ಮುಂದುವರೆದಿದ್ದು, ಜನರು ಪರದಾಡುವಂತಾಗಿದೆ.

ನಗರದಲ್ಲಿ ಮಂಗಳವಾರ ಸುಮಾರು 17 ಗಂಟೆಗಳ ಕಾಲ ಸುರಿದ ಮಳೆಯು ಹತ್ತಾರು ಅವಾಂತರಗಳನ್ನು ಸೃಷ್ಟಿ ಮಾಡಿತ್ತು. ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತ ಮಾಡಿದೆ. ಮುಂದಿನ ಎರಡು ದಿನಗಳವರೆಗೆ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ.

ಎರಡು ದಿನಗಳವರೆಗೆ ರಾಜ್ಯದ್ಯಾಂತ ಬಹುತೇಕ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಉಡುಪಿ, ದಕ್ಷಿಣ ಕನ್ನಡ ಯೆಲ್ಲೋ ಅಲರ್ಟ್ ನೀಡಲಾಗಿದೆ.

ನಗರದಲ್ಲಿ ಜಡಿ ಮಳೆ ಮುಂದುವರೆದಿದ್ದು, ನಾಗರಿಕರಿಗೆ ಕಿರಿಕಿರಿಯುಂಟು ಮಾಡಿದೆ. ಜಿಟಿಜಿಟಿ ಮಳೆಯ ನಡುವೆಯೂ ಜನರು ತಮ್ಮ ನಿತ್ಯದ ಕೆಲಸಗಳಿಗೆ ತೆರಳುತ್ತಿದ್ದಾರೆ. ಆದರೆ, ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು. ನಗರದ ಕೆಲ ಅಪಾರ್ಟ್‍ಮೆಂಟ್ ಆವರಣಗಳು ಸಂಪೂರ್ಣ ಜಲಾವೃತವಾಗಿದ್ದು, ನಿವಾಸಿಗಳು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ರಾಜಾಜಿನಗರ, ವಿಜಯನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆ ಸುರಿಯುತ್ತಿದೆ. ಪರಪ್ಪನ ಅಗ್ರಹಾರ ಸುತ್ತಮುತ್ತ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ನಗರದಲ್ಲಿ ಮಂಗಳವಾರದಿಂದ ಇದುವರೆಗೆ 66.1 ಮಿ.ಮೀ ಮಳೆಯಾಗಿದ್ದು, ಎಚ್‍ಎಎಲ್ ವ್ಯಾಪ್ತಿಯಲ್ಲಿ 89.3 ಮಿ.ಮೀ ಮಳೆ ದಾಖಲಾಗಿದೆ.

ಸಾಯಿ ಲೇಔಟ್ ಜಲಾವೃತ: ಸಾಯಿ ಲೇಔಟ್ ನ ಜನರನ್ನು ಕೇಳುವವರಿಲ್ಲ ಹೇಳುವವರಿಲ್ಲ ಎನ್ನುವಂತಾಗಿದೆ. ಕಳೆದ ಒಂದು ವರ್ಷದಿಂದಲಂತೂ ಲೇಔಟ್ ಜನರ ಮಳೆ ಬಂದರೆ ಸಾಕು ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಈ ಲೇಔಟ್ ನ ಜನರಿಗೆ ಮಳೆ ಎಂದರೆ ಕನಸಲ್ಲೂ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇಂದ್ರಿಯ ವಿಹಾರ ಅಪಾರ್ಟ್‍ಮೆಂಟ್, ಕ್ಯಾಲಿಫೋರ್ನಿಯ ಲೇಔಟ್ ಜಲಾವೃತ:

ಯಲಹಂಕದಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್‍ಮೆಂಟ್ ಹಾಗೂ ಕ್ಯಾಲಿಫೋರ್ನಿಯ ಲೇಔಟ್‍ಗಳು ಜಲಾವೃತಗೊಂಡಿವೆ. ಈ ಎರಡೂ ಕಡೆ ಪ್ರತಿ ಬಾರಿ ಮಳೆ ಬಂದಾಗಲೂ ಇದೆ ರೀತಿ ನೀರು ತುಂಬಿ ಲೇಔಟ್ ಜಲವೃತವಾಗುತ್ತಿದೆ. ಸದ್ಯ ಮನೆಯಿಂದ ಹೊರಬರಲು ಆಗದೇ ತಾವೇ ಟ್ರ್ಯಾಕ್ಟರ್ ನಿಯೋಜನೆ ಮಾಡಿಕೊಂಡು ಜನ ಲೇಔಟ್ ನಿಂದ ಹೊರಗೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ನಿರ್ಮಾಣ ಆಗಿರುವ ಮಿನಿ ಹೊಳೆಯನ್ನು ಫೈರ್ ಇಂಜಿನ್ ಕರೆಸಿ ಹೊರ ಹಾಕುವ ಪ್ರಯತ್ನ ಮಾಡಲಾಗುತ್ತಿದೆ.

ವರ್ಚುವಲ್ ಸಭೆ:

ಮಳೆಯಾಗುತ್ತಿರುವ ಹಿನ್ನೆಲೆ ಬುಧವಾರ ಬೆಳಗ್ಗೆ ವರ್ಚುವಲ್ ಮೂಲಕ ಸಭೆ ನಡೆಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಯಾ ವಲಯ ವ್ಯಾಪ್ತಿಯಲ್ಲಿ ಸಮಸ್ಯೆಯಾಗಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಸ್ಥಳದಲ್ಲಾಗಿರುವ ಸಮಸ್ಯೆ ಬಗ್ಗೆ ಅವಲೋಕಿಸಿ ಆ ಸ್ಥಳದಲ್ಲಿ ಶಾಶ್ವತ ಪರಿಹಾರ ಹುಡುಕಿ, ಇರುವ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News