ರೈತರಿಗೆ ಐದು ಗಂಟೆಗಳ ಕಾಲ ಸತತ ವಿದ್ಯುತ್ ಪೂರೈಕೆ: ಸಿಎಂ ಸಿದ್ದರಾಮಯ್ಯ
ಮೈಸೂರು, ಅ.16: ಮಳೆ ಕೊರತೆಯಿಂದಾಗಿ ವಿದ್ಯುತ್ ಸಮಸ್ಯೆ ತಲೆದೋರಿರುವುದು ನಿಜ. ಈ ಬಗ್ಗೆ ಸಭೆ ನಡೆಸಿ, ರೈತರಿಗೆ ಮೂರು ಫೇಸ್ ಗಳಲ್ಲಿ 5 ಗಂಟೆಗಳ ಕಾಲ ಸತತ ವಿದ್ಯುತ್ ನೀಡಲು ಸೂಚಿಸಲಾಗಿದೆ. ಇದಕ್ಕೆ ಹೊರಗಿನಿಂದ ವಿದ್ಯುತ್ ಖರೀದಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿಂದು ಗ್ರಾಮೀಣ ಭಾಗಕ್ಕೆ ವಿದ್ಯುತ್ ಸಮರ್ಪಕವಾಗಿ ಸರಬರಾಜಾಗುತ್ತಿಲ್ಲವೆಂಬ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನಮ್ಮ ಹಿಂದಿನ ಸರ್ಕಾರದ ಅವಧಿಯಲ್ಲಿ ವಿದ್ಯುತ್ ಉತ್ಪಾದನೆ ಹೊರತುಪಡಿಸಿದರೆ, ನಂತರದ ಬಿಜೆಪಿ ಅಥವಾ ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಒಂದು ಮೆ.ವ್ಯಾಟ್ ವಿದ್ಯುತ್ತನ್ನೂ ಉತ್ಪಾದನೆ ಮಾಡಿಲ್ಲ. ಮಳೆ ಅಭಾವದಿಂದಾಗಿ ಪಂಪಸೆಟ್ ಗಳಿಗೆ ವಿದ್ಯುತ್ ವ್ಯತ್ಯಯವಾಗಿದೆ. ಸಾಧಾರಣವಾಗಿ, ಅಕ್ಟೋಬರ್ ಮಾಹೆಯವರೆಗೆ 10,000 ಮೆ.ವ್ಯಾ ವಿದ್ಯುತ್ ಖರ್ಚಾಗುತ್ತಿತ್ತು. ಆದರೆ ಈ ಬಾರಿ 16,000 ಮೆ.ವ್ಯಾಟ್ ಖರ್ಚಾಗುತ್ತಿದೆ. ಸುಮಾರು 2 ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇದೆ. ಇದರಿಂದಾಗಿ ವಿದ್ಯುತ್ ಸಮಸ್ಯೆ ತಲೆದೋರಿರುವುದು ನಿಜ ಎಂದು ಹೇಳಿದರು.
ಕಬ್ಬು ಅರೆಯುವಿಕೆಯಿಂದ ವಿದ್ಯುತ್ ಕೋ ಜನರೇಷನ್ ನತ್ತಲೂ ಗಮನಹರಿಸಲು ಸೂಚಿಸಲಾಗಿದೆ. ಲೋಡ್ ಶೆಡ್ಡಿಂಗ್ ನಿಂದ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.